
ಬೆಂಗಳೂರು.ಆ.೨೩- ಅದಾನಿ ಎಂಟರ್‌ಪ್ರೈಸಸ್ ಛೇರ್ಮನ್ ಗೌತಮ್ ಅದಾನಿ ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಕನಕಪುರದಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ಆಗಮಿಸಿದ್ದ ಅದಾನಿ, ವಾಪಸ್ ತೆರಳುವಾಗ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಸುಮಾರು ೨೦ ನಿಮಿಷಗಳ ಕಾಲ ಸಿಎಂ ಡಿಕೆ ಶಿವಕುಮಾರ್ ಜೊತೆ ಅದಾನಿ ಮಾತುಕತೆ ನಡೆಸಿದ್ದಾರೆ.ಆದರ ಏನು ಮಾತುಕತೆ ನಡೆಯಿತು ಎಂಬ ಮಾಹಿತಿ ಹೊರಬೀಳದಿದ್ದರೂ ರಾಜ್ಯದಲ್ಲಿ ಉದ್ದಿಮೆ ಅವಕಾಶಗಳ ಜತೆಗೆ, ಬಹುನಿರೀಕ್ಷಿತ ಬೆಂಗಳೂರು ಸುರಂಗ ರಸ್ತೆ ಯೋಜನೆ ಗುತ್ತಿಗೆ ಹಂಚಿಕೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ ಬೆಂಗಳೂರು ಸುರಂಗ ರಸ್ತೆ ಯೋಜನೆ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಬೃಹತ್ ಯೋಜನೆಗೆ ಖ್ಯಾತ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಎಂಟರ್‌ಪ್ರೈಸಸ್ ಅತ್ಯಂತ ಕಡಿಮೆ ಮೊತ್ತದ ಬಿಡ್ ಸಲ್ಲಿಸಿ ಮುಂಚೂಣಿಯಲ್ಲಿದೆ.ಆದರೆ, ರಾಜ್ಯ ಸರ್ಕಾರದ ಅಂದಾಜು ವೆಚ್ಚಕ್ಕಿಂತ ಬಿಡ್ ಮೊತ್ತ ಹೆಚ್ಚಿರುವ ಕಾರಣ ಟೆಂಡರ್ ಅಂತಿಮಗೊಳಿಸುವುದು ತಡವಾಗುತ್ತಿದೆ. ಹೀಗಾಗಿ ಸ್ವತಃ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ತೀವ್ರ ರಾಜಕೀಯ ಹಾಗೂ ವಾಣಿಜ್ಯ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ನಡುವೆ ಸುಮಾರು ೧೭ ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ಸರ್ಕಾರ ಅಂದಾಜು ೧೭,೬೯೮ ಕೋಟಿ ವೆಚ್ಚ ನಿಗದಿಪಡಿಸಿತ್ತು. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸಂಸ್ಥೆಯು ೨೨,೨೬೭ ಕೋಟಿ ರೂ. ಮೊತ್ತವನ್ನು ನಮೂದಿಸಿ ಅತಿ ಕಡಿಮೆ ಬಿಡ್ ಸಲ್ಲಿಸಿದ ಸಂಸ್ಥೆಯಾಗಿ ಹೊರಹೊಮ್ಮಿದೆ. ಸರ್ಕಾರದ ಅಂದಾಜು ಮೊತ್ತಕ್ಕಿಂತ ಇದು ಹೆಚ್ಚಾಗಿದ್ದರೂ, ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದ ಇತರೆ ಸಂಸ್ಥೆಗಳಿಗೆ ಹೋಲಿಸಿದರೆ ಅದಾನಿ ಸಂಸ್ಥೆಯ ಮೊತ್ತವೇ ಕಡಿಮೆಯಾಗಿದೆ.
ಟೆಂಡರ್ ಅಂತಿಮಗೊಳ್ಳುವ ಮುನ್ನವೇ ಸಂಸ್ಥೆಯು ಸುರಂಗ ಮಾರ್ಗ ಹಾದುಹೋಗುವ ಸ್ಥಳಗಳಲ್ಲಿ ಅಗತ್ಯವಿರುವ ಪ್ರಾಥಮಿಕ ಭೂ ಸಮೀಕ್ಷೆ ಹಾಗೂ ಮಣ್ಣಿನ ಗುಣಮಟ್ಟ ಪರೀಕ್ಷೆ ಸೇರಿದಂತೆ ಪ್ರಮುಖ ತಾಂತ್ರಿಕ ಪರೀಕ್ಷೆಗಳನ್ನು ಈಗಾಗಲೇ ಪೂರ್ಣಗೊಳಿಸಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಈ ಯೋಜನೆಗೆ ಅದಾನಿ ಗ್ರೂಪ್ ಸುಮಾರು ೨೨,೨೬೭ ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದೆ. ತಾಂತ್ರಿಕವಾಗಿ ಅದಾನಿ ಸಂಸ್ಥೆ ಅತ್ಯಂತ ಕಡಿಮೆ ಮೊತ್ತ ನಮೂದಿಸಿದ(ಐ೧)ಗುತ್ತಿಗೆದಾರ ಸಂಸ್ಥೆಯಾಗಿ ಹೊರಹೊಮ್ಮಿದೆ.
ಆದರೆ, ರಾಜ್ಯ ಸರ್ಕಾರ ಮತ್ತು ಯೋಜನೆಯ ಉಸ್ತುವಾರಿ ಹೊತ್ತಿರುವ ಬಿ-ಸ್ಮೈಲ್ ಸಂಸ್ಥೆಯ ಮೂಲ ಅಂದಾಜು ವೆಚ್ಚ ಸುಮಾರು ೧೭,೬೯೮ ಕೋಟಿ ರೂಪಾಯಿಗಳಷ್ಟಿತ್ತು.ಸರ್ಕಾರದ ನಿರೀಕ್ಷೆಗಿಂತ ಅದಾನಿ ಗ್ರೂಪ್ ಕೋಟ್ ಮಾಡಿರುವ ಮೊತ್ತವು ಸುಮಾರು ೪,೫೬೯ ಕೋಟಿ ಅಧಿಕವಾಗಿದೆ.ಹೀಗಾಗಿ ಅಧಿಕೃತವಾಗಿ ಗುತ್ತಿಗೆಯನ್ನು ಇನ್ನೂ ಅದಾನಿ ಸಂಸ್ಥೆಗೆ ಹಸ್ತಾಂತರಿಸಲಾಗಿಲ್ಲ.
ಟೆಂಡರ್ ವೆಚ್ಚದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿರುವುದರಿಂದ,ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬಿ-ಸ್ಮೈಲ್ ಸಂಸ್ಥೆಯು ಫೈಲ್ ಅನ್ನು ರಾಜ್ಯ ಸಚಿವ ಸಂಪುಟದ ಅಂಗಳಕ್ಕೆ ತಳ್ಳಿದೆ.
ಅದಾನಿ ಸಂಸ್ಥೆಯು ಗುತ್ತಿಗೆ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದು, ಅಧಿಕೃತವಾಗಿ ಕಾಮಗಾರಿ ವಹಿಸುವ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ವೆಚ್ಚ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟದ ಅಂತಿಮ ಅನುಮೋದನೆ ಪಡೆಯಬೇಕಿರುವ ಹಿನ್ನೆಲೆಯಲ್ಲಿ, ಗೌತಮ್ ಅದಾನಿ ಈ ಭೇಟಿ ಮತ್ತು ಚರ್ಚೆ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಹೆಚ್ಚಿನ ಗಮನ ಸೆಳೆದಿದೆ.

































