
ಬೆಂಗಳೂರು, ಆ. ೨೪- ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ತಮ್ಮ ಹೋರಾಟವನ್ನು ಬಿರುಸುಗೊಳಿಸಿದ್ದು, ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರೇ, ಸದನದ ಹೊರಗೆ ವಿಧಾನಸೌಧದ ಮುತ್ತಿಗೆ ಚಳವಳಿಯನ್ನು ನಡೆಸಿದವು.
ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆಯ ಒಳಗೂ, ಹೊರಗೂ ಹೋರಾಟ ನಡೆಸಿರುವ ಪ್ರತಿಪಕ್ಷಗಳು ಇಂದಿನಿಂದ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಣೆ ಮಾಡಿವೆ.
ಇಂದು ಸದನ ಕಲಾಪಗಳು ಆರಂಭಕ್ಕೂ ಮುನ್ನವೇ ಪ್ರತಿಪಕ್ಷಗಳು ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆಯ ಮುತ್ತಿಗೆ ಪ್ರಯತ್ನ ನಡೆಸಿದ್ದವು. ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದರು.
ಇಂದು ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಳೆದ ಐದು ದಿನಗಳಿಂದ ಸದನದಲ್ಲಿ ನಡೆಸಿದ್ದ ಹೋರಾಟವನ್ನು ಇಂದೂ ಮುಂದುವರೆಸಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸಿರುವ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಲೇಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿ, ಸರ್ಕಾರದ ವಿರುದ್ಧ ಹಾಗೂ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತು.
ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಉತ್ತಮ ಕಲಾಪಕ್ಕೆ ಮನವಿ ಮಾಡಿದರೂ ಅದಕ್ಕೆ ಪ್ರತಿ ಪಕ್ಷಗಳು ಒಪ್ಪಲಿಲ್ಲ. ಈ ಹಂತದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ ಅವರು, ವಿಪಕ್ಷಗಳು ಸದನದಲ್ಲಿ ಚರ್ಚೆಗೆ ಸಿದ್ಧರಿಲ್ಲ. ಕಲಾಪ ಹಾಳು ಮಾಡಲು ಹೋರಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಕಚಕಮಕಿ ನಡೆದ ಗದ್ದಲ ತಾರಕ್ಕೆಕೇರಿ ಈ ಗದ್ದಲದಲ್ಲೇ ಮಾತನಾಡಿದ ಪ್ರತಿ ಪಕ್ಷ ನಾಯಕ ಆರ್. ಅಶೋಕ್, ಸಚಿವ ಬಿ ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು. ನಾವು ಚರ್ಚೆಗೆ ಸಿದ್ಧರಿದ್ದೇವೆ. ನಾವು ಬರ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ. ಆದರೆ ಕಳಂಕಿತ ಸಚಿವರನ್ನು ಇಟ್ಟುಕೊಂಡು ಚರ್ಚೆ ಮಾಡುವುದಾದರೂ ಹೇಗೆ. ಮೊದಲು ಸಚಿವ ನಾಗೇಂದ್ರ ರಾಜೀನಾಮೆ ಕೊಡಲಿ ನಂತರ ಚರ್ಚೆ ಎಂದು ಏರು ಧ್ವನಿಯಲ್ಲಿ ಹೇಳಿದರು.
ಈ ಹಂತದಲ್ಲಿ ಮತ್ತೆ ಸಚಿವ ಕೃಷ್ಣ ಬೈರೇಗೌಡ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವೆ ವಾಗ್ವಾದ ನಡೆಯಿತು. ನೀವು ಏನೇ ಹೇಳಿದರೂ ನಮ್ಮ ಹೋರಾಟ ನಿಲ್ಲಲ್ಲ. ಇಂದಿನಿಂದ ನಾವು ಸದನದಿಂದ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಹೇಳಿ, ಅಶೋಕ್ ಅವರ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಜತೆ ಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ಧರಣಿ ಆರಂಭಿಸಿದರು.
ಪ್ರತಿಪಕ್ಷಗಳು ಧರಣಿ ನಡೆಸುತ್ತಿದ್ದರೂ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ, ವಿಧೇಯಕಗಳ ಮಂಡನೆ ಕಲಾಪ ನಡೆಸಿದರು. ಸದನ ಸುವ್ಯವಸ್ಥೆಯಲಿಲ್ಲ. ಹೀಗೆ ಕಲಾಪ ನಡೆಸುವುದು ಸರಿಯಲ್ಲ ಎದಂ ಅಶೋಕ್ ಹೇಳಿದರೂ ಅದಕ್ಕೆ ಕಿವಿಗೊಡದ ಸಭಾಧ್ಯಕ್ಷರು, ವಿಧೇಯಕಗಳ ಅಂಗೀಕಾರ , ಕಲಾಪ ನಡೆದು ವಿಪಕ್ಷಗಳ ಧರಣಿ, ಘೋಷಣೆಗಳ ನಡುವೆಯೇ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.
ವಿಧಾನಸಭೆಯಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಪ್ರತಿಪಕ್ಷ ಸದಸ್ಯರು ಕಳೆದ ಐದು ದಿನಗಳಿಂದ ತಮ್ಮ ಸ್ಥಾನದಲ್ಲೇ ಎದ್ದು ನಿಂತು, ಘೋಷಣೆಗಳನ್ನು ಕೂಗುತ್ತಿದ್ದರು. ಇಂದು ಮಾತ್ರ ಪ್ರತಿಪಕ್ಷ ನಾಯಕ ಆರ್. ಅಶೋಕ್, ಅಹೋರಾತ್ರಿ ಧರಣಿ ಘೋಷಣೆ ಮಾಡಿದ ಕೂಡಲೇ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಂದ ಸಭಾಧ್ಯಕ್ಷರ ಮುಂದಿನ ಬಾವಿಗೆ ತೆರಳಿ ಧರಣಿ ಆರಂಭಿಸಿದರು
ಐದು ದಿನಗಳಿಂದ ತಮ್ಮ ಸ್ಥಾನದ ಬಳಿಯೇ ನಿಂತು ಘೋಷಣೆಗಳನ್ನು ಕೂಗಿ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ವಿಪಕ್ಷಗಳು ಇಂದಿನಿಂದ ಅಹೋರಾತ್ರಿ ಧರಣಿ ಆರಂಭಿಸುವ ಮೂಲಕ ಸದನದಲ್ಲಿ ಹೋರಾಟವನ್ನು ಮತ್ತಷ್ಟು ಬಿರುಸುಗೊಳಿಸಿವೆ. ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

































