Home ಜಿಲ್ಲೆ ಕಲಬುರಗಿ ಶ್ರೀ ಜೈವೀರ ಹನುಮಾನ್ ಮಂದಿರದಲ್ಲಿ ಆಷಾಢ ಏಕಾದಶಿ ಸಂಭ್ರಮ

ಶ್ರೀ ಜೈವೀರ ಹನುಮಾನ್ ಮಂದಿರದಲ್ಲಿ ಆಷಾಢ ಏಕಾದಶಿ ಸಂಭ್ರಮ

ಕಲಬುರಗಿ,ಜು 25: ಇಲ್ಲಿನ ಕರುಣೇಶ್ವರ ನಗರದ ಶ್ರೀ ಜೈವೀರ ಹನುಮಾನ್ ಮಂದಿರದಲ್ಲಿ ಇಂದು ಆಷಾಢ ಏಕಾದಶಿಯ ವಿಶೇಷ ಪಾರಾಯಣ ಹಾಗೂ ಧಾರ್ಮಿಕ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಮದ್ ಭಗವದ್ಗೀತೆಯ 15ನೇ ಅಧ್ಯಾಯ, ವಿಷ್ಣು ಸಹಸ್ರನಾಮ, ಶ್ರೀ ವೆಂಕಟೇಶ ಸ್ತೋತ್ರ ಹಾಗೂ ಕೃಷ್ಣಾಷ್ಟಕವನ್ನು ಸಾಮೂಹಿಕವಾಗಿ ಪಠಿಸಲಾಯಿತು. ಪಾಂಡುರಂಗ ಹಾಗೂ ರುಕ್ಮಿಣಿ ದೇವಿಯ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ ಮಂಗಳಾರತಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪಾರಾಯಣ ಸಂಘದ ವಿನುತ ಜೋಶಿ ಅವರು ಮಾತನಾಡಿ, ದೇವಶಯನಿ ಏಕಾದಶಿ, ತಪ್ತ ಮುದ್ರಾಧಾರಣೆ, ಚಾತುರ್ಮಾಸ್ಯ ವ್ರತ, ಪಂಢರಪುರ ವಿಠ್ಠಲ ಭಕ್ತಿ ಪರಂಪರೆ ಹಾಗೂ ವೈಷ್ಣವ ದೈನಂದಿನ ಆಚಾರ-ವಿಚಾರಗಳ ಮಹತ್ವವನ್ನು ವಿವರಿಸಿದರು.ಆಷಾಢ ಶುಕ್ಲ ಏಕಾದಶಿಯಂದು ಶ್ರೀಹರಿಯು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಯೋಗನಿದ್ರೆಗೆ ಪ್ರವೇಶಿಸುತ್ತಾನೆ ಎಂಬ ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದ ಅವರು, ಭಗವಂತನ ಯೋಗನಿದ್ರೆ ಸಾಮಾನ್ಯ ನಿದ್ರೆಯಲ್ಲ; ಜಗತ್ತಿನ ಕಲ್ಯಾಣಕ್ಕಾಗಿ ಇರುವ ದಿವ್ಯ ಯೋಗಸ್ಥಿತಿ ಎಂದು ತಿಳಿಸಿದರು.
ತಪ್ತ ಮುದ್ರಾಧಾರಣೆಯು ವೈಷ್ಣವ ಸಂಪ್ರದಾಯದ ಪ್ರಮುಖ ಆಚರಣೆಯಾಗಿದ್ದು, ಶಂಖ, ಚಕ್ರ ಸೇರಿದಂತೆ ಭಗವಂತನ ಆಯುಧಗಳ ಮುದ್ರೆಗಳನ್ನು ಧರಿಸುವುದು ಶರಣಾಗತಿ, ಆಧ್ಯಾತ್ಮಿಕ ಶುದ್ಧಿ ಹಾಗೂ ಧಾರ್ಮಿಕ ಶಿಸ್ತಿನ ಸಂಕೇತವಾಗಿದೆ, ಸನಾತನ ಧರ್ಮದಲ್ಲಿ ದೇಹದ ನರಮಂಡಲಕ್ಕೆ ಶಕ್ತಿ ತುಂಬುವ, ಪಾಪಗಳನ್ನು ಕಳೆಯುವ ಮುದ್ರಾಧಾರಣೆ ಎನ್ನುವ ಅತಿ ಶ್ರೇಷ್ಠ ವೈಜ್ಞಾನಿಕ ಪದ್ಧತಿ ಎಂದು ಹೇಳಿದರು.
ಚಾತುರ್ಮಾಸ್ಯ ವ್ರತವು ಇಂದ್ರಿಯನಿಗ್ರಹ, ಆಹಾರ ಸಂಯಮ ಮತ್ತು ಆತ್ಮಸಾಧನೆಗೆ ಅತ್ಯುತ್ತಮ ಕಾಲವಾಗಿದ್ದು, ಈ ಅವಧಿಯಲ್ಲಿ ನಿಯಮಬದ್ಧ ಜೀವನವನ್ನು ಅನುಸರಿಸುವುದರಿಂದ ಆರೋಗ್ಯ ಮತ್ತು ಆಧ್ಯಾತ್ಮಿಕ ಉನ್ನತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಪಂಢರಪುರದ ವಿಠ್ಠಲ, ಪುಂಡಲೀಕನ ಮಾತೃ-ಪಿತೃ ಭಕ್ತಿ, ವಾರಕರಿ ಸಂಪ್ರದಾಯ ಹಾಗೂ ಕರ್ನಾಟಕದ ಹರಿದಾಸರ ಭಕ್ತಿ ಪರಂಪರೆಯನ್ನು ಉಲ್ಲೇಖಿಸಿದ ಅವರು, ನಾಮಸ್ಮರಣೆ, ಸೇವಾಭಾವ ಮತ್ತು ವಿನಯವೇ ಭಗವಂತನನ್ನು ಒಲಿಸಿಕೊಳ್ಳುವ ನಿಜವಾದ ಮಾರ್ಗ ಎಂದು ಹೇಳಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಡಾ.ಶ್ರೀನಿವಾಸ್ ಜಹಾಗೀರದಾರ, ಶಂಕರರಾವ್ ಸಿಂದಗಿಕರ್, ಕಿಶನರಾವ್ ಕುಲಕರ್ಣಿ, ಸಮೀರ್ ಕುಲಕರ್ಣಿ, ಸುನಿಲ್ ಕುಲಕರ್ಣಿ ನರಸಿಂಗರಾವ್ ಕುಲಕರ್ಣಿ ದೇವಸ್ಥಾನದ ಅರ್ಚಕರಾದ ಪ್ರದ್ಯುಮ್ನಾಚಾರ್ಯ ಜೋಶಿ, ವೆಂಕಟೇಶಾಚಾರ್ಯ ನೆಲೋಗಿ, ಸೇರಿದಂತೆ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಾರಾಯಣ, ಪೂಜೆ, ಆಷಾಢ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.