Home ಕ್ರೈಂ ಸುದ್ದಿಗಳು ಕುಖ್ಯಾತ ಕಳ್ಳನ ಬಂಧನ ೪೪.೭೦ ಲಕ್ಷ ಮೌಲ್ಯದ ಚಿನ್ನ ಜಪ್ತಿ

ಕುಖ್ಯಾತ ಕಳ್ಳನ ಬಂಧನ ೪೪.೭೦ ಲಕ್ಷ ಮೌಲ್ಯದ ಚಿನ್ನ ಜಪ್ತಿ

ಬೆಂಗಳೂರು,ನ.೨೫- ಬೀಗ ಹಾಕಿದ್ದ ಮನೆಗಳನ್ನೇ ಗುರ್ತಿಸಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿ ೪೪.೭೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಚಾಮರಾಜಪೇಟೆಯ ವಾಲ್ಮೀಕಿನಗರದ ಯಾಸಿನ್ ಖಾನ್ ಅಲಿಯಾಸ್ ಚೋರ್ ಇಮ್ರಾನ್(೩೯)ಬಂಧಿತ ಆರೋಪಿಯಾಗಿದ್ದು, ಆತನಿಂದ ೪೪.೭೦ ಲಕ್ಷ ಮೌಲ್ಯದ ೩೪೪ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ನಗರ ಪೊಲೀಸ್ ಮುಖ್ಯ ಆಯುಕ್ತ ಆರ್.ಹಿತೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಗೋವಿಂದರಾಜನಗರದ ಮೂಡಲಪಾಳ್ಯದ ಸಂಜೀವಿನಿನಗರದ ಪ್ರಮೋದ್ ಅವರು ಕಳೆದ ಆ.೧೦ರಂದು ಸಂಜೆ ಮನೆಗೆ ಬೀಗ ಹಾಕಿಕೊಂಡು ಸ್ವಂತ ಊರಿಗೆ ತೆರಳಿದ್ದರು. ಆಗಸ್ಟ್ ೧೧ರಂದು ರಾತ್ರಿ ಮನೆ ಮಾಲೀಕರ ಪತ್ನಿ ಕರೆ ಮಾಡಿ ಮನೆಯ ಬೀಗ ಒಡೆದಿರುವುದಾಗಿ ಮಾಹಿತಿ ನೀಡಿದ್ದರು. ಕೂಡಲೇ ಮನೆಗೆ ಮರಳಿದಾಗ ಬೀಗ ಒಡೆದು ಒಳನುಗ್ಗಿದ್ದ ಕಳ್ಳರು ಬೀರುವಿನ ಬೀಗವನ್ನೂ ಮುರಿದು ಚಿನ್ನಾಭರಣ, ನಗದು ಹಾಗೂ ಬೆಳ್ಳಿಯ ದೀಪಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು.


ಈ ಸಂಬಂಧ ಆಗಸ್ಟ್ ೧೨ರಂದು ಗೋವಿಂದರಾಜನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ವೇಳೆ ಕೆ.ಆರ್.ಪುರಂ ಪೊಲೀಸ್ ಠಾಣೆಯ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಅಕ್ಟೋಬರ್ ೩೧ರಂದು ನ್ಯಾಯಾಲಯದಿಂದ ಬಾಡಿ ವಾರಂಟ್ ಪಡೆದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


ವಿಚಾರಣೆ ವೇಳೆ ಆರೋಪಿ ಗೋವಿಂದರಾಜನಗರ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮುಂಬೈ, ಹೈದರಾಬಾದ್ ಹಾಗೂ ಕಲಬುರಗಿಯ ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.


ಆರೋಪಿಯ ಮಾಹಿತಿ ಮೇರೆಗೆ ನವೆಂಬರ್ ೧ರಿಂದ ೧೧ರವರೆಗೆ ವಿವಿಧ ಜ್ಯುವೆಲ್ಲರಿ ಅಂಗಡಿಗಳಿಂದ ಒಟ್ಟು ೩೪೪ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.


ನಾಲ್ಕು ಪ್ರಕರಣ ಪತ್ತೆ:
ಆರೋಪಿಯ ಬಂಧನದಿಂದ ಗೋವಿಂದರಾಜನಗರ ಪೊಲೀಸ್ ಠಾಣೆಯ ಎರಡು ಪ್ರಕರಣಗಳು, ಜೆ.ಪಿ.ನಗರ ಹಾಗೂ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.


ನವೆಂಬರ್ ೧೨ರಂದು ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಮತ್ತೆ ಕಾರಾಗೃಹಕ್ಕೆ ಕಳುಹಿಸಲಾಗಿದೆ.


ಪಶ್ಚಿಮ ವಿಭಾಗದ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಡಿಸಿಪಿ ಡಾ. ಸೌಮ್ಯಲತಾ ಎಸ್.ಕೆ. ಅವರ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಭೂತೇಗೌಡ ನೇತೃತ್ವದಲ್ಲಿ ಗೋವಿಂದರಾಜನಗರ ಠಾಣೆಯ ಇನ್‌ಸ್ಪೆಕ್ಟರ್ ಲಕ್ಷ್ಮಣ್ ಸಿ. ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.