
ಬೆಂಗಳೂರು,ನ.೨೬-ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಲಾತ್ಮಕ ಸ್ಪರ್ಶ ದೊರೆತಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಕಲಾವಿದೆ ಅಲಕಾ ರಾವ್ ಅವರು ವಿಶಿಷ್ಟ ಕಲಾ ನಮನ ಸಲ್ಲಿಸಿದ್ದಾರೆ.
೮ ‘ಗುಲಾಬಿ ಯೋಧರು’ ಎಂಬ ಪರಿಕಲ್ಪನೆಯಡಿ ಮೂಡಿಬಂದಿರುವ ಈ ಕಲಾ ಅಭಿವ್ಯಕ್ತಿ ಗಮನ ಸೆಳೆಯುತ್ತಿದೆ.
ಗುಲಾಬಿ ಬಣ್ಣದಲ್ಲಿ ಹೋರಾಟದ ಸಂಕೇತ
ಆಶಾ ಕಾರ್ಯಕರ್ತೆಯರು ಸಾಮಾನ್ಯವಾಗಿ ಗುಲಾಬಿ ಬಣ್ಣದ ಸೀರೆ ಧರಿಸಿ ಆರೋಗ್ಯ ಸೇವೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇದೇ ಗುಲಾಬಿ ಬಣ್ಣವನ್ನು ಕೇಂದ್ರವಾಗಿಟ್ಟು ಕೊಂಡು ಕಲಾವಿದೆ ಅಲಕಾ ರಾವ್ ಅವರು ತಮ್ಮ ಕಲಾ ಅಭಿವ್ಯಕ್ತಿಯನ್ನು ರೂಪಿಸಿರುವುದು ವಿಶೇಷವಾಗಿದೆ. ಈ ಮೂಲಕ ಆಶಾ ಕಾರ್ಯಕರ್ತೆಯರ ಒಗ್ಗಟ್ಟು, ಧೈರ್ಯ, ಶ್ರಮ ಹಾಗೂ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟವನ್ನು ಕಲೆಯ ಭಾಷೆಯಲ್ಲಿ ಬಿಂಬಿಸುವ ಪ್ರಯತ್ನ ನಡೆದಿದೆ.
ಅಲಕಾ ರಾವ್ ಅವರ ಕಲಾ ನಮನವು ಕೇವಲ ಚಿತ್ರಕಲೆಯ ಪ್ರದರ್ಶನವಾಗಿ ಉಳಿಯದೆ, ದುಡಿಯುವ ಮಹಿಳೆಯರ ಶ್ರಮಕ್ಕೆ ಮನ್ನಣೆ ನೀಡುವ ಮತ್ತು ಅವರ ಬೇಡಿಕೆಗಳತ್ತ ಸಮಾಜದ ಗಮನ ಸೆಳೆಯುವ ಸಾಂಕೇತಿಕ ಅಭಿವ್ಯಕ್ತಿಯಾಗಿದೆ.
ಆರು ಅಡಿ ಅಗಲ ಮತ್ತು ಅರವತ್ತು ಅಡಿ ಉದ್ದದ ಬಟ್ಟೆಯನ್ನು ಒಂದು ದೊಡ್ಡ ಗುಲಾಬಿ ಬಣ್ಣದ ಸೀರೆಯಂತೆ ರೂಪಿಸಲಾಗಿತ್ತು. ಈ ಸೀರೆ ಆಶಾ ಕಾರ್ಯಕರ್ತೆಯರ ಒಗ್ಗಟ್ಟಿನ ಗುರುತು. ಅದು ಅವರ ಅಸ್ಮಿತೆ, ಶಕ್ತಿ ಮತ್ತು ಪರಸ್ಪರರ ಬೆಂಬಲದ ಸಂಕೇತ ಎಂದು ಹೇಳಲಾಗಿದೆ.
ಆಶಾ ಕಾರ್ಯಕರ್ತೆಯರು ಸೀರೆಯ ಮೇಲೆ ಗಾಢ ಗುಲಾಬಿ ಬಣ್ಣದ ಕೈಮುದ್ರೆಗಳನ್ನು ಒತ್ತಿದ್ದಾರೆ. ಪ್ರತಿಯೊಂದು ಕೈ ಮುದ್ರೆಯೂ ಒಬ್ಬೊಬ್ಬ ಮಹಿಳೆಯ ಬದುಕು, ಶ್ರಮ, ಸೇವೆ ಮತ್ತು ಹೋರಾಟವನ್ನು ಪ್ರತಿನಿಧಿಸುತ್ತದೆ. ಕೈಗಳು ಬೇರೆ ಬೇರೆಯಾಗಿರಬಹುದು, ಆದರೆ ಅವುಗಳ ಶಕ್ತಿ ಒಂದಾದಾಗ ದೊಡ್ಡ ಶಕ್ತಿಯಾಗುತ್ತದೆ.
ಬಟ್ಟೆಯ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಎತ್ತಿದ ಕೈಗಳು ಮತ್ತು ಬಿಗಿದ ಮುಷ್ಟಿಗಳ ಮುದ್ರೆಗಳಿವೆ. ಇವು ಧೈರ್ಯ, ಪ್ರತಿಭಟನೆ, ಒಗ್ಗಟ್ಟು ಮತ್ತು ನಮ್ಮ ಧ್ವನಿಯನ್ನು ಕೇಳಿಸಲೇಬೇಕೆಂಬ ಛಲವನ್ನು ತೋರಿಸುತ್ತವೆ. ಇಲ್ಲಿ ಯಾರ ಮುಖವೂ ಇಲ್ಲ. ಏಕೆಂದರೆ ಇದು ಒಬ್ಬಿಬ್ಬರ ಹೋರಾಟವಲ್ಲ, ಸಾವಿರಾರು ಆಶಾ ಕಾರ್ಯಕರ್ತೆಯರ ಹೋರಾಟ.
ಬಟ್ಟೆಯ ಕೆಳಭಾಗದಲ್ಲಿರುವ ಒಂದೇ ದಿಕ್ಕಿನ ಕಪ್ಪು ಹೆಜ್ಜೆ ಗುರುತುಗಳು ಅವರ ವರ್ಷಗಳ ಸೇವೆ, ದಿನನಿತ್ಯದ ಓಡಾಟ ಮತ್ತು ನ್ಯಾಯದ ಕಡೆಗೆ ಸಾಗುತ್ತಿರುವ ಹೆಜ್ಜೆಗಳನ್ನು ಸೂಚಿಸುತ್ತವೆ.




















