Home ಮುಖಪುಟ ಸುದ್ದಿ ತಾಲೀಮು ವೇಳೆ ಬೆದರಿದ ದಸರಾ ಆನೆ ಮಹೇಂದ್ರ – ಕೆ.ಆರ್.ಆಸ್ಪತ್ರೆ ಸರ್ಕಲ್ ಬಳಿ ಆತಂಕ

ತಾಲೀಮು ವೇಳೆ ಬೆದರಿದ ದಸರಾ ಆನೆ ಮಹೇಂದ್ರ – ಕೆ.ಆರ್.ಆಸ್ಪತ್ರೆ ಸರ್ಕಲ್ ಬಳಿ ಆತಂಕ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಗಜಪಡೆಗಳಿಗೆ ತಾಲೀಮು ನೀಡುವ ವೇಳೆ ಅಂಬಾರಿ ಆನೆ ಮಹೇಂದ್ರ ಬೆದರಿದ ಘಟನೆ ಇಂದು ಮೈಸೂರಿನ ಕೆ.ಆರ್. ಆಸ್ಪತ್ರೆ ಸರ್ಕಲ್ ಬಳಿ ನಡೆದಿದೆ.

ಮರದ ಅಂಬಾರಿ ಹೊತ್ತು ತಾಲೀಮು ನಡೆಸುತ್ತಿದ್ದ ವೇಳೆ ಏಕಾಏಕಿ ಬೆದರಿದ ಮಹೇಂದ್ರ ಮುಂದಕ್ಕೂ ಹೋಗದೆ, ಹಿಂದಕ್ಕೂ ಹೋಗದೆ ಸ್ಥಳದಲ್ಲೇ ನಿಂತುಬಿಟ್ಟಿದ್ದಾನೆ. ಇದರಿಂದ ಗಜಪಡೆಯ ಜೊತೆಗಿದ್ದ ಸಿಬ್ಬಂದಿ ಕೆಲಕಾಲ ಆತಂಕಕ್ಕೀಡಾಗಿದ್ದರು.

ಮಹೇಂದ್ರನ ಸ್ಥಿತಿ ಕಂಡು ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಆನೆಯ ಮೇಲಿದ್ದ ಮರದ ಅಂಬಾರಿಯನ್ನು ಬಿಚ್ಚಿ, ಆನೆಯನ್ನು ನಿಯಂತ್ರಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಆನೆ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.