Home ಕ್ರೈಂ ಸುದ್ದಿಗಳು ಗರ್ಭಿಣಿಯ ವೇಷದಲ್ಲಿ ಎಸಿ… ತಾಯಿಯ ವೇಷದಲ್ಲಿ ಡಿಎಚ್‍ಒ!ಭ್ರೂಣಲಿಂಗ ಪತ್ತೆ ಜಾಲಕ್ಕೆ ಮಹಿಳಾ ಅಧಿಕಾರಿಗಳ ‘ಸಿನಿಮೀಯ’ ಬಲೆ...

ಗರ್ಭಿಣಿಯ ವೇಷದಲ್ಲಿ ಎಸಿ… ತಾಯಿಯ ವೇಷದಲ್ಲಿ ಡಿಎಚ್‍ಒ!ಭ್ರೂಣಲಿಂಗ ಪತ್ತೆ ಜಾಲಕ್ಕೆ ಮಹಿಳಾ ಅಧಿಕಾರಿಗಳ ‘ಸಿನಿಮೀಯ’ ಬಲೆ – ಇಬ್ಬರ ಬಂಧನ

ಮಹಾಲಿಂಗಪುರ :ಗರ್ಭಿಣಿಯ ವೇಷದಲ್ಲಿ ಎಸಿ… ಗರ್ಭಿಣಿಯ ತಾಯಿಯಂತೆ ಡಿಎಚ್‍ಒ… ಮತ್ತೊಬ್ಬ ಅಧಿಕಾರಿ ನಾದಿನಿಯ ವೇಷದಲ್ಲಿ!ಹೀಗೆ ಮಾರುವೇಷ ಧರಿಸಿ ಮಹಿಳಾ ಅಧಿಕಾರಿಗಳ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆ ಇದೀಗ ಭ್ರೂಣಲಿಂಗ ಪತ್ತೆ ಜಾಲದ ವಿರುದ್ಧ ನಡೆದ ಮಹತ್ವದ ಕಾರ್ಯಾಚರಣೆಯಾಗಿ ಗಮನ ಸೆಳೆದಿದೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಭ್ರೂಣಲಿಂಗ ಪತ್ತೆ ಮಾಡಿ, ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗುತ್ತಿದ್ದರೆನ್ನಲಾದ ಜಾಲದ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಅಧಿಕಾರಿಗಳೇ ‘ಗರ್ಭಿಣಿಯರು’!

ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರು ಗರ್ಭಿಣಿ ಮಹಿಳೆಯಂತೆ ಮಾರುವೇಷ ಧರಿಸಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುವರ್ಣ ಕುಲಕರ್ಣಿ ಅವರು ಗರ್ಭಿಣಿಯ ತಾಯಿಯಂತೆ ವೇಷ ಧರಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶೋಭಾ ಅವರು ಗರ್ಭಿಣಿಯ ನಾದಿನಿಯಂತೆ ಸಾಥ್ ನೀಡಿದ್ದರು.

ಭ್ರೂಣಲಿಂಗ ಪತ್ತೆ ಮಾಡಿಸಿಕೊಳ್ಳುವ ನೆಪದಲ್ಲಿ ತಂಡವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಡರ ಬಬಲಾದ ಗ್ರಾಮಕ್ಕೆ ತೆರಳಿ, ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದೆ.

ಇಬ್ಬರು ಬಂಧನ… ಸ್ಕ್ಯಾನಿಂಗ್ ಯಂತ್ರ ವಶ

ಕಾರ್ಯಾಚರಣೆ ವೇಳೆ ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಲಾಗಿದ್ದು, ಸ್ಕ್ಯಾನಿಂಗ್ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಈ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ನಕಲಿ ವೈದ್ಯ ಸಂಜಯ್ ವಾಘಮೋಡೆ ಎಂಬಾತ ಸದ್ಯ ಪರಾರಿಯಾಗಿದ್ದು, ಆತನ ಪತ್ತೆಗೆ ಅಧಿಕಾರಿಗಳು ಜಾಲ ಬೀಸಿದ್ದಾರೆ.

ಇನ್ನೆಷ್ಟು ಮಂದಿ ಜಾಲದಲ್ಲಿ?

ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಆರೋಪಗಳ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ? ಈ ಜಾಲ ಎಷ್ಟು ದಿನಗಳಿಂದ ಕಾರ್ಯನಿರ್ವಹಿಸುತ್ತಿತ್ತು? ಯಾರ್ಯಾರಿಗೆ ಇದರ ಸಂಪರ್ಕವಿದೆ? ಎಂಬ ಹಲವು ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.

ಮಹಿಳಾ ಅಧಿಕಾರಿಗಳ ಮಾರುವೇಷದ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಎಂಬ ಚರ್ಚೆಗೂ ಕಾರಣವಾಗಿದೆ.

ತನಿಖೆ ಮುಂದುವರಿದಿದ್ದು, ಪರಾರಿಯಾಗಿರುವ ವ್ಯಕ್ತಿಯ ಪತ್ತೆ ಹಾಗೂ ಜಾಲದ ಸಂಪೂರ್ಣ ವಿವರ ತನಿಖೆಯಿಂದ ಹೊರಬರಬೇಕಿದೆ.