
ಶಿವಮೊಗ್ಗ, ಜೂ,೧೮-ಶಿವಮೊಗ್ಗ ಮಹಾನಗರ ಪಾಲಿಕೆ ೧ ನೇ ವಾರ್ಡ್ ನ ಕರ್ನಾಟಕ ಗೃಹ ಮಂಡಳಿ ಬಡಾವಣೆ, ಎಂಎಸ್ಕೆ ಸಿಟಿ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳ ಪಾರ್ಕ್ ಗಳಿಗೆ ಜೂನ್ ೧೭ ರ ಬೆಳಿಗ್ಗೆ ಮಹಾನಗರ ಪಾಲಿಕೆ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಭಾಕರ್ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕರಾದ ಲೋಹಿತ್ ಅವರು ಭೇಟಿಯಿತ್ತು ಪರಿಶೀಲಿಸಿದರು.
ಇದೇ ವೇಳೆ ಗಿಡಗಂಟೆಗಳಿಂದ ಬೆಳೆದುಕೊಂಡಿದ್ದ ಪಾರ್ಕ್ ಗಳಲ್ಲಿ ಪಾಲಿಕೆ ಆಡಳಿತದಿಂದ ಕೈಗೊಂಡಿರುವ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಡಾವಣೆಗಳ ನಿವಾಸಿಗಳ ಅಹವಾಲು ಆಲಿಸಿದರು. ಪಾರ್ಕ್ ಗಳ ಸ್ವಚ್ಛತೆ, ಗಿಡ ನೆಡುವಿಕೆ, ಅಭಿವೃದ್ದಿ ಕುರಿತಂತೆ ನಿವಾಸಿಗಳು ಮನವಿ ಪತ್ರ ಅರ್ಪಿಸಿದರು.
ಈ ಸಂದರ್ಭದಲ್ಲಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ರಾಮಚಂದ್ರಪ್ಪ, ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಪ್ರಮುಖರಾದ ಕೊಟ್ರೇಶಪ್ಪ, ಕುಶಕುಮಾರ್ ಮೊದಲಾದವರಿದ್ದರು.
ನಂತರ ಎಇಇ ಪ್ರಭಾಕರ್ ಅವರು ಮಾತನಾಡಿ, ನಾಗರಿಕರ ಸಹಯೋಗದೊಂದಿಗೆ ಪಾರ್ಕ್ ಗಳ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗಿದೆ. ಗಿಡ ನೆಡಲು ಹಾಗೂ ಬೆಳೆಸಲು ಸಹಕಾರ ನೀಡಲಾಗುವುದು. ಹಾಗೆಯೇ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ದ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಿಯಾವಾಕಿ ಅರಣ್ಯ ಬೆಳೆಸಲು ಮನವಿ
ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಾರ್ಕ್ ಗಳಲ್ಲಿ ‘ಮಿಯಾವಾಕಿ’ ಪದ್ದತಿಯಡಿ ಕಿರು ಅರಣ್ಯ ಬೆಳೆಸುವ ಯೋಜನೆ ರೂಪಿಸಿದೆ. ಎಂಎಸ್ಕೆ ಸಿಟಿ ಲೇಔಟ್ ನಲ್ಲಿ ಸುಮಾರು ೨ ಎಕರೆ ವಿಸ್ತೀರ್ಣದಲ್ಲಿ ಪಾರ್ಕ್ ಇದೆ. ಸಂಪೂರ್ಣ ತಡೆಗೋಡೆ ಯೊಂದಿದೆ. ಶಿವಮೊಗ್ಗ ತಾಲೂಕಿನಲ್ಲಿಯೇ ಅತೀ ದೊಡ್ಡ ಕೆರೆಯಾಗಿರುವ ಸೋಮಿನಕೊಪ್ಪ ಕೆರೆಗೆ ಹೊಂದಿಕೊಂಡಂತೆ ಪಾರ್ಕ್ ಇದೆ. ಈ ಕಾರಣದಿಂದ ಸದರಿ ಪಾರ್ಕ್ ನಲ್ಲಿ ‘ಮಿಯಾವಾಕಿ’ ವ್ಯವಸ್ಥೆಯಡಿ ಕಿರು ಅರಣ್ಯ ಬೆಳೆಸುವಂತೆ ಸ್ಥಳೀಯ ನಿವಾಸಿಗಳು ಪಾಲಿಕೆ ಪರಿಸರ ವಿಭಾಗದ ಎಇಇ ಪ್ರಭಾಕರ್ ಹಾಗೂ ವಾರ್ಡ್ ಹೆಲ್ತ್ ಇನ್ಸ್’ಪೆಕ್ಟರ್ ಲೋಹಿತ್ ಅವರಿಗೆ ಮನವಿ ಮಾಡಿದರು.

































