Home ಮುಖಪುಟ ಸುದ್ದಿ ಆರೋಪ ಸಾಬೀತು ಮಾಡಲಿ, ಇಲ್ಲವೆ ಡಿಕೆಶಿ ರಾಜೀನಾಮೆ ನೀಡಲಿ

ಆರೋಪ ಸಾಬೀತು ಮಾಡಲಿ, ಇಲ್ಲವೆ ಡಿಕೆಶಿ ರಾಜೀನಾಮೆ ನೀಡಲಿ

ಬಿವೈವಿ ಸವಾಲು

ಬೆಂಗಳೂರು,ಅ. ೨ ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧ ಮಾಡಿದ ಆರೋಪಗಳನ್ನು ಸಾಬೀತು ಪಡಿಸಲಿ; ಇಲ್ಲವಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ.


ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಮಾಧ್ಯಮಗಳ ಜೊತೆ ಅವರು ಇಂದು ಮಾತನಾಡಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಸಚಿವಸಂಪುಟದ ಸಭೆಯನ್ನೂ ರದ್ದು ಮಾಡಿ ರಾಜ್ಯ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಅಲ್ಲಿ ಮಾತನಾಡುವ ವೇಳೆ ಭಾರತೀಯ ಜನತಾ ಪಾರ್ಟಿಯು ಫಾರಂ ಸೆವೆನ್ ಅನ್ನು ಬಳಸಿಕೊಂಡು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಡುವ ಸಂಚು ಮಾಡಿದ್ದಾಗಿ ದೂರಿದ್ದಾರೆ. ಅಹಿಂದ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಕುತಂತ್ರ ಬಿಜೆಪಿಯದು ಎಂದಿದ್ದಾರೆ. ಬಿಜೆಪಿ ವಿರುದ್ಧ ಅವರು ಕುತಂತ್ರ, ಷಡ್ಯಂತ್ರದ ಆರೋಪ ಮಾಡಿದ್ದು ಅದನ್ನು ಸಾಬೀತು ಮಾಡಬೇಕೆಂದು ಒತ್ತಾಯಿಸಿದರು.

ಸುಳ್ಳು ಪ್ರತಿಭಟನೆಯನ್ನು ಮಾಡಿ ಇಡೀ ದೇಶದ ಗಮನವನ್ನು ಸೆಳೆಯುವ ಕೆಲಸ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿ ಕಪಟ ನಾಟಕ ಮಾಡಿದ್ದಾರೆ ಎಂದರಲ್ಲದೇ ವಿಡಿಯೋ ಮೂಲಕ ಸಿಎಂ ಮಾತನ್ನು ಕೇಳಿಸಿದರು.


ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮೈಸೂರು ಜಿಲ್ಲೆಯ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಿಂದ ೧,೩೦,೦೦೦ ಮತದಾರರು ಹೆಚ್ಚಾಗಿದ್ದಾರೆ. ಇದು ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಆಗಿದೆ. ಈ ಎಸ್.ಐ.ಆರ್ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಅನಿಲ್ ಥಾಮಸ್ ರವರು ಸಹಜವಾಗಿ ಎಸ್.ಐ.ಆರ್ ಪ್ರಕ್ರಿಯೆ ನಡೀಬೇಕಾದರೆ ಅಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಆಗ ಒಂದೇ ಜಾಗದಲ್ಲಿ ಸಾವಿರಾರು ಜನ ಅಲ್ಪಸಂಖ್ಯಾತ ಬಂಧುಗಳು ಮುತ್ತಿಕೊಂಡಿದ್ದು ಕಂಡುಬಂತು ಎಂದು ವಿವರಿಸಿದರು


ಬಿ.ಎಲ್.ಒ ಗಳನ್ನ ಮುತ್ತಿಗೆ ಹಾಕಿದ್ದ ಮತದಾರರನ್ನು ಪ್ರಶ್ನಿಸಲಾಯಿತು. ಅದರಲ್ಲಿ ಕೆಲವರು ಹೊರ ರಾಜ್ಯದವರು ಇದ್ದರು ಬೇರೆ ಬೇರೆ ವಿಧಾನಸಭಾ ಕ್ಷೇತ್ರದವರು ಕೂಡ ಇದ್ದರು. ನಿಮಗೆ ಈ ವಿಧಾನಸಭಾ ಕ್ಷೇತ್ರವೇ? ನೀವ್ಯಾಕೆ ಇಲ್ಲಿ ಬಂದು ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೀರಿ? ನೀವ್ಯಾಕೆ ಇಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುತ್ತೀರಿ ಅಂತ ಕೇಳಿದಾಗ ‘ಇಲ್ಲ ಅಣ್ಣ ನಾನು ಪ್ರತಿಸಾರಿನು ಇಲ್ಲೇ ಬಂದು ವೋಟ್ ಹಾಕೋದು’ ಎಂದಿದ್ದಾಗಿ ಗಮನಕ್ಕೆ ತಂದರು. ಹೊರರಾಜ್ಯದವರು ಕೂಡ ಬಂದು ಕೃಷ್ಣರಾಜ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ. ಅಕ್ಕಪಕ್ಕ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಅವರ ಹೆಸರು ಇರುತ್ತದೆ; ಇಲ್ಲೂ ಬಂದು ಅವರ ಹೆಸರು ಸೇರಿಸಿದ್ದಾರೆ ಎಂದು ಆಕ್ಷೇಪಿಸಿದರು.


ಈ ರೀತಿಯ ಅಕ್ರಮವಾಗಿ ಮಾಡಿರುವ ಪರಿಣಾಮವಾಗಿನೇ ಕಳೆದ ಎರಡು ಚುನಾವಣೆಗಳಿಂದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ೧,೩೦,೦೦೦ ಮತದಾರರು ಇದು ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗಿದ್ದಾರೆ. ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಈ ರೀತಿ ಆಗಿದೆ ಬೆಂಗಳೂರಿನ ಶಾಂತಿನಗರ, ಶಿವಾಜಿನಗರ, ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿ ಎಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದಾರೆ ಅಲ್ಲಿ ಈ ರೀತಿ ಅಕ್ರಮವಾಗಿ ಮತದಾರ ಪಟ್ಟಿಗೆ ಸೇರಿಸುವ ಕೆಲಸ ಕೆಲಸ ಹಿಂದಿನಿಂದ ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದಲೇ ನಡೆದುಕೊಂಡು ಬಂದಿದೆ ಎಂದು ಆಕ್ಷೇಪಿಸಿದರು.


ನಿನ್ನೆ ದಕ್ಷಿಣ ಕನ್ನಡದ ಮಂಗಳೂರಿನಿಂದ ಮಾಹಿತಿ ಪಡೆದಿದ್ದೆ. ಅಲ್ಲಿ ಗಡಿಭಾಗದ ಕೇರಳ ರಾಜ್ಯದ ಗಡಿಭಾಗದ ವಿಧಾನಸಭಾ ಕ್ಷೇತ್ರದಲ್ಲೂ ಇರುವ ಕೆಲವು ಅಲ್ಪಸಂಖ್ಯಾತರು ಅಲ್ಲಿ ಮಾತ್ರವಲ್ಲದೇ ಬಿಜೆಪಿ ಪ್ರಾಬಲ್ಯ ಇರುವ ದಕ್ಷಿಣ ಕನ್ನಡದ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಗೆ ಹೆಸರು ಸೇರಿಸಿದ ಅನೇಕ ಉದಾಹರಣೆಗಳು ಇವೆ ಎಂದು ಆರೋಪಿಸಿದರು.

ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕಿ ನಮ್ಮ ಕಾರ್ಯಕರ್ತರ ಮೇಲೆ ಎಫ್‌ಐಆರ್ ಹಾಕಿಸುವ ಬೆದರಿಕೆ ಹಾಕಿದ್ದಾರೆ. ಇಡೀ ರಾಜ್ಯವನ್ನು ಎಫ್‌ಐಆರ್ ರಾಜ್ಯ ಮಾಡಲು ಮುಖ್ಯಮಂತ್ರಿ ಹೊರಟಿದ್ದಾರೆ. ಇಂತಹುದಕ್ಕೆಲ್ಲ ಬಿಜೆಪಿ ಬಗ್ಗುವುದಿಲ್ಲ ಎಂದು ವಿಜಯೇಂದ್ರ ಅವರು ಹೇಳಿದರು.
ಇಂತಹ ಎಲ್ಲಾ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಶಕ್ತಿ ಬಿಜೆಪಿಗೆ ಇದೆ. ಸಾವಿರ ಎಫ್‌ಐಆರ್‍ಗಳನ್ನು ಹಾಕಿದರೂ ಹೆದರುವ ಮಾತೇ ಇಲ್ಲ. ಇಂತಹ ಎಫ್‌ಐಆರ್‍ಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತೇವೆ ಎಂದರು.

ಎಸ್.ಐ.ಆರ್ ಪ್ರಕ್ರಿಯೆ ನಡೆದಿದೆ. ೫೦ ಲಕ್ಷ ಹೆಸರನ್ನು ಇಡೀ ರಾಜ್ಯದಲ್ಲಿ ಕೈಬಿಡೋದಕ್ಕೆ ಹೊರಟಿದ್ದಾರೆ ಅಂತ ಹೇಳಿದ್ದಾರೆ. ಆದರೆ, ನನಗೆ ಇರುವ ಮಾಹಿತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಕೇವಲ ೨೫,೦೦೦ ಫಾರಂ ಸೆವೆನ್ ಅರ್ಜಿಗಳನ್ನು ಕೊಟ್ಟಿದ್ದಾರೆ ಎಂದು ವಿವರ ನೀಡಿದರು. ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ- ರದ್ದು ಮಾಡುವುದು ಯಾರ ಕರ್ತವ್ಯ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.


ಚುನಾವಣಾ ಆಯೋಗ ಒಂದು ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದೆ ಬಿಎಲ್‌ಒಗಳು ಯಾರು. ಕರ್ನಾಟಕ ರಾಜ್ಯದಲ್ಲಿ ಇವತ್ತು ಯಾವ ಪಕ್ಷ ಅಧಿಕಾರದಲ್ಲಿದೆ? ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ನಿಮ್ಮದೇ ಪಕ್ಷದವರು ರಾಜ್ಯದಲ್ಲಿ ಅಧಿಕಾರದಲ್ಲಿ ಆಡಳಿತ ನಡೆಸುತ್ತಾ ಇದೆ. ಬ್ಲಾಕ್ ಲೆವೆಲ್ ಆಫೀಸರ್ ಗಳು ನಿಮ್ಮ ಕಪಿಮುಷ್ಟಿಯಲ್ಲಿ ಇದ್ದಾರೆ. ಹೆಸರು ಕೈಬಿಟ್ಟಿದ್ದರಲ್ಲಿ ಎಆರೊ ಮತ್ತು ಬಿಎಲ್‌ಒಗಳ ಪಾತ್ರ ಇದೆ ಎಂದು ಗಮನಕ್ಕೆ ತಂದರು.


ಕುಣಿಯಲಾರದವನಿಗೆ ನೆಲ ಡೊಂಕು ಎಂದ ಹಾಗೆ ಚುನಾವಣಾ ಆಯೋಗದ ಮೇಲೆ ದೂರು ನೀಡುವುದು, ಆರೋಪ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅರಾಜಕತೆ ಸೃಷ್ಟಿಗೆ ಕಾಂಗ್ರೆಸ್ ಮುಂದಾಗಿದೆ. ಎಸ್‌ಐಆರ್ ನಡೆಯುವಾಗ ಕರ್ನಾಟಕ

ದಲ್ಲಿ ಅನೇಕ ಪ್ರಕರಣ ಆಗಿವೆ. ಆಗೆಲ್ಲ ಬಿಜೆಪಿ ಹಾಗೂ ಜೆಡಿಎಸ್ ದೂರು ನೀಡಿದ್ದೇವೆ. ಹಾಗಾದರೆ ಆ ದೂರುಗಳ ಕಥೆ ಏನಾಗಿದೆ ಎಂದು ಪ್ರಶ್ನಿಸಿದರು.
ಬಿಎಲ್‌ಒಗಳು ಎನ್ಯೂಮರೇಷನ್ ಫಾರಂಗಳನ್ನು ಮನೆಮನೆಗೆ ಹೋಗಿ ಕೊಡಬೇಕಿತ್ತು. ಆದರೆ ಕಾಂಗ್ರೆಸ್ ಫುಡಾರಿಗಳ ಕೈಗೆ ಕೊಟ್ಟು ಹಂಚಿದ್ದರು. ಮಸೀದಿ, ಮದರಸಾಗಳಲ್ಲಿ ಸಾಮೂಹಿಕವಾಗಿ ಕುಳಿತ ಮತಪಟ್ಟಿಗೆ ಸೇರಿಸುವ ಸಂಚು ನಡೆಸಿದ್ದರು. ಎಲ್ಲಾ ಅಕ್ರಮ ಮಾಡಿ ಈಗ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಗುಡುಗಿದರು.

ಎಸ್‌ಐಆರ್ ಇಡೀ ದೇಶದಲ್ಲಿ ಪಾರದರ್ಶಕವಾಗಿ ನಡೆಯುತ್ತಿದೆ. ಫಾರಂ ೭ ಅಧಿಕೃತವಾಗಿ ಚುನಾವಣಾ ಆಯೋಗ ನೀಡಿದ ಹಕ್ಕು ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದು. ಇದನ್ನು ಎಲ್ಲಾ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಚುನಾವಣೆ ಪಾರದರ್ಶಕವಾಗಿ ನಡೆಯಲು ಮತ್ತು ಅಕ್ರಮ ಮತದಾರರು ಸೇರದಂತೆ ನೋಡಿಕೊಳ್ಳುವುದರ ಬಗ್ಗೆ ಸಿಎಂ ತಲೆಕೆಡಿಸಿಕೊಳ್ಳಲಿ. ಅದು ಬಿಟ್ಟು ದಬ್ಬಾಳಿಕೆ ಮಾಡುವುದು ಬೇಡ ಎಂದರು.