Home ಮುಖಪುಟ ಸುದ್ದಿ ೬ ಕೋಟಿ ಮೌಲ್ಯದ ರಾಜಕಾಲುವೆ ಜಾಗ ಒತ್ತುವರಿ ತೆರವು

೬ ಕೋಟಿ ಮೌಲ್ಯದ ರಾಜಕಾಲುವೆ ಜಾಗ ಒತ್ತುವರಿ ತೆರವು

ಬೆಂಗಳೂರು, ಅ.೨: ನಗರದ ಮಳೆನೀರು ಹರಿವಿಗೆ ಅಡ್ಡಿಯಾಗಿದ್ದ ರಾಜಕಾಲುವೆ ಜಾಗದ ಒತ್ತುವರಿ ತೆರವುಗೊಳಿಸಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಸುಮಾರು ೬ ಕೋಟಿ ಮೌಲ್ಯದ ೬ ಗುಂಟೆ ಸರ್ಕಾರಿ ಜಾಗವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.


ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬೊಮ್ಮನಹಳ್ಳಿ ವಲಯ-೨ರ ಎಚ್‌ಎಸ್‌ಆರ್ ವಿಭಾಗ, ಕೂಡ್ಲು ಉಪವಿಭಾಗ ವ್ಯಾಪ್ತಿಯ ಹರಳೂರು ಗ್ರಾಮದ ಸರ್ವೆ ನಂ. ೨/೧ರಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಸುಮಾರು ೬,೫೩೪ ಚದರ ಅಡಿ ವಿಸ್ತೀರ್ಣದ ಬಿ-ಖರಾಬ್ ರಾಜಕಾಲುವೆ ಹಾಗೂ ಹಳ್ಳದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಹಾಗೂ ಶೆಡ್‌ಗಳನ್ನು ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ


ಒತ್ತುವರಿ ತೆರವು ಸಂಬಂಧ ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ಹಾಗೂ ಲಕ್ಷ್ಮಿನಾರಾಯಣ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಓಅಖ(ಇ) ಅಖ/೧೨೧/೨೦೨೪-೨೫ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜಕಾಲುವೆ ಹಾಗೂ ಹಳ್ಳದ ಖರಾಬ್ ಜಾಗದಲ್ಲಿನ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿತ್ತು. ಒತ್ತುವರಿದಾರರು ತೆರವುಗೊಳಿಸಲು ವಿಫಲವಾದಲ್ಲಿ ಪಾಲಿಕೆ ವತಿಯಿಂದಲೇ ತೆರವು ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಲಾಗಿತ್ತು.


ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕೂಡ್ಲು ವಿಭಾಗದ ಪಾಲಿಕೆ ಅಭಿಯಂತರರು, ಸರ್ವೇಯರ್‌ಗಳು ಹಾಗೂ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಹಾಗೂ ಶೆಡ್‌ಗಳನ್ನು ತೆರವುಗೊಳಿಸಿ ೬ ಗುಂಟೆ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆಯಲಾಯಿತು.

ಮಳೆನೀರು ಹರಿವಿಗೆ ಅನುಕೂಲ:


ರಾಜಕಾಲುವೆಯ ನೈಸರ್ಗಿಕ ಹರಿವನ್ನು ಸಂರಕ್ಷಿಸುವುದು ಹಾಗೂ ಮಳೆ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.


ಸಾರ್ವಜನಿಕ ಬಳಕೆಯ ರಾಜಕಾಲುವೆ ಹಾಗೂ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡುವವರ ವಿರುದ್ಧ ಮುಂದಿನ ದಿನಗಳಲ್ಲಿಯೂ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.