
ಸಂಜೆವಾಣಿ ನ್ಯೂಸ್
ಮೈಸೂರು, ಜು.24:- ಸ್ವರಾಜ್ಯದ ಕನಸನ್ನು ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಬಿತ್ತಿದ ಕ್ರಾಂತಿವೀರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಅಂತಿಮ ಉಸಿರಿನವರೆಗೂ ‘ಆಜಾದ್’ ಆಗಿಯೇ ಉಳಿದ ವೀರ ಸೇನಾನಿ ಚಂದ್ರಶೇಖರ ಆಜಾದ್ ಅವರ ಜನ್ಮದಿನವನ್ನು ಅಪೂರ್ವ ಸ್ನೇಹ ಬಳಗದ ವತಿಯಿಂದ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಯಿತು. ಅಖಂಡ ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸಿದ ತಿಲಕ್ ಮತ್ತು ಬ್ರಿಟಿಷರ ಗುಲಾಮಗಿರಿಗೆ ಎಂದೂ ತಲೆಬಾಗದ ಆಜಾದ್ ಅವರ ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾಜಿ ನಗರ ಪಾಲಿಕಾ ಸದಸ್ಯ ಮಾ.ವಿ.ರಾಮ್ ಪ್ರಸಾದ್, ಡಿ.ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡವರಹಳ್ಳಿ ರಾಮಕೃಷ್ಣ, ಜಗದೀಶ್, ಅಪೂರ್ವ ಸುರೇಶ್, ದೂರ ರಾಜಣ್ಣ, ಸಂದೀಪ್, ಬಸವರಾಜ್, ನಾಗೇಶ್ ಯಾದವ್, ದಯಾನಂದ ನಾಯಕ್, ಸುಚೇಂದ್ರ, ಮಿರ್ಲೆ ಪನೀಷ, ಮಹದೇವಸ್ವಾಮಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.
ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ರಾಷ್ಟ್ರಭಕ್ತಿಯನ್ನು ಬೆಸೆಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸಂಘಟಕರು ತಿಳಿಸಿದರು.


































