Home ಜಿಲ್ಲೆ ಸಾರ್ವಜನಿಕರು ಆತಂಕ ಪಡದೆ ಫಾರ್ಮ್ ಭರ್ತಿ ಮಾಡಿ ಸಹಕರಿಸಿ: ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ

ಸಾರ್ವಜನಿಕರು ಆತಂಕ ಪಡದೆ ಫಾರ್ಮ್ ಭರ್ತಿ ಮಾಡಿ ಸಹಕರಿಸಿ: ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ

ಸಂಜೆ ವಾಣಿ ವಾರ್ತೆ
ಜಮಖಂಡಿ ಜು ೧೦: ಜಮಖಂಡಿ ಮತಕ್ಷೇತ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದ್ದು, ಒಟ್ಟು ೨,೩೦,೦೦೬ ಮತದಾರರ ಎನುಮರೇಷನ್ ಫಾರ್ಮ್ಗಳಲ್ಲಿ ಈಗಾಗಲೇ ೨,೧೨,೪೮೬ ಫಾರ್ಮ್ಗಳನ್ನು ವಿತರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.
ನಗರದ ತಾಲೂಕಾಡಳಿತ ಸೌಧದ ತಹಶೀಲ್ದಾರರ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಮಖಂಡಿ ಮತಕ್ಷೇತ್ರದಲ್ಲಿ ಇದುವರೆಗೆ ಶೇ.೯೨.೩೮ ರಷ್ಟು ಫಾರ್ಮ್ ವಿತರಣೆ ಪೂರ್ಣಗೊಂಡಿದ್ದು, ಉಳಿದ ೨೬,೭೨೬ ಮತದಾರರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಮುಂದಿನ ಎರಡು ದಿನ ವಿಶೇಷ ಅಭಿಯಾನ ನಡೆಸಿ ಶೇ.೧೦೦ ರಷ್ಟು ವಿತರಣೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನಗರ ವ್ಯಾಪ್ತಿಯಲ್ಲೇ ಸುಮಾರು ೧೨,೪೦೦ ಮತದಾರರು ಮನೆಗಳಲ್ಲಿ ಲಭ್ಯವಾಗದೆ ಇರುವುದರಿಂದ ಫಾರ್ಮ್ ವಿತರಣೆ ಬಾಕಿಯಿದೆ. ವಿಶೇಷವಾಗಿ ಗಿರೀಶ ನಗರ ಹಾಗೂ ಮತಗಟ್ಟೆ ಸಂಖ್ಯೆ ೧೭೬, ೧೭೭ ಸೇರಿದಂತೆ ವಿಸ್ತರಣೆ ಪ್ರದೇಶಗಳಲ್ಲಿ ಮತದಾರರ ಸಹಕಾರ ಅಗತ್ಯವಿದೆ. ಬೂತ್ ಮಟ್ಟದ ಅಧಿಕಾರಿಗಳು ಮನೆಗೆ ಬಂದಾಗ ಸಾರ್ವಜನಿಕರು ಫಾರ್ಮ್ ಪಡೆದುಕೊಂಡು ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿತರಿಸಿದ ಫಾರ್ಮ್ಗಳ ಸಂಗ್ರಹ ಮತ್ತು ಡಿಜಿಟಲೀಕರಣ ಕಾರ್ಯವೂ ಆರಂಭವಾಗಿದ್ದು, ಈಗಾಗಲೇ ಶೇ.೧೧.೬೨ ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ಮತದಾರರು ಫಾರ್ಮ್ಗಳನ್ನು ಭರ್ತಿ ಮಾಡಿ ಶೀಘ್ರವಾಗಿ ಬಿಎಲ್‌ಒಗಳಿಗೆ ಹಿಂತಿರುಗಿಸಬೇಕು ಎಂದು ಹೇಳಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಜಮಖಂಡಿ ನಗರದಲ್ಲಿ ೧೦ ಮತದಾರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಭವನ, ರುದ್ರಸ್ವಾಮಿ ಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶಿವಾಜಿ ಸರ್ಕಲ್ ಪಶು ಆಸ್ಪತ್ರೆ ಆವರಣ, ಎಪಿಎಂಸಿ ಹತ್ತಿರದ ಮಂಗಳ ಕಾರ್ಯಾಲಯ, ಚೌಡಯ್ಯ ನಗರ ಅಂಗನವಾಡಿ ಕೇಂದ್ರ, ಶಾಲಂ ಗೇಟ್ ಪೊಲೀಸ್ ಚೌಕಿ, ಅರಣ್ಯ ಇಲಾಖೆ ಆವರಣ, ರಾನಡೆ ಭವನ ಪಿ.ಬಿ. ಶಾಲೆ, ಮೀನುಗಾರಿಕೆ ಇಲಾಖೆ ಕಚೇರಿ ಹಾಗೂ ಚೆನ್ನಮ್ಮ ಮಾರ್ಕೆಟ್ ನಗರಸಭೆ ಕಾಂಪ್ಲೆಕ್ಸ್ನಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ೨೭ ಗ್ರಾಮ ಪಂಚಾಯಿತಿಗಳಲ್ಲಿಯೂ ಸಹಾಯ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಫಾರ್ಮ್ ಭರ್ತಿ ಮಾಡುವಲ್ಲಿ ಗೊಂದಲ ಇದ್ದರೆ ಅಧಿಕಾರಿಗಳು ಸಹಾಯ ಮಾಡಲಿದ್ದಾರೆ ಎಂದರು.
ಮೃತರಾದ ಮತದಾರರ ವಿವರ ಇದ್ದರೆ ಫಾರ್ಮ್ ಮೇಲೆ ‘ಮೃತ’ ಎಂದು ನಮೂದಿಸಿ ಮರಣ ಪ್ರಮಾಣ ಪತ್ರ ಲಗತ್ತಿಸಬೇಕು. ಸ್ಥಳಾಂತರಗೊAಡವರು ಹಾಗೂ ದೀರ್ಘಕಾಲದಿಂದ ವಾಸವಿಲ್ಲದವರ ವಿವರಗಳನ್ನು ಪರಿಶೀಲಿಸಿ ಚುನಾವಣಾ ಆಯೋಗದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಣ್ಣಪುಟ್ಟ ತಪ್ಪುಗಳಿಂದ ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಆತಂಕ ಬೇಡ. ಅಗತ್ಯ ತಿದ್ದುಪಡಿಗಳನ್ನು ಬಿಎಲ್‌ಒ ಹಾಗೂ ತಹಶೀಲ್ದಾರ ಕಚೇರಿ ಹಂತದಲ್ಲಿ ಸರಿಪಡಿಸಲಾಗುತ್ತದೆ. ಸಾರ್ವಜನಿಕರು ಭಯಪಡದೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಆನ್‌ಲೈನ್ ಮೂಲಕ ಫಾರ್ಮ್ ಸಲ್ಲಿಸಿದ ಮತದಾರರು ಪಡೆದ ನೋಂದಣಿ ಐಡಿ ಸಂಖ್ಯೆಯನ್ನು ಎನುಮರೇಷನ್ ಫಾರ್ಮ್ ಮೇಲೆ ದಾಖಲಿಸಿ ಬಿಎಲ್‌ಒಗಳಿಗೆ ನೀಡಬೇಕು. ಆನ್‌ಲೈನ್ ಅರ್ಜಿಗಳನ್ನೂ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದರು.