
ಭಾಲ್ಕಿ,ಜು.೫: ಉತ್ತಮ ಪುಸ್ತಕಗಳಿಗೆ ಮನಸ್ಸು ಮತ್ತು ಮನುಷ್ಯರನ್ನು ಪರಿವರ್ತಿಸುವ ಅಗಾಧ ಶಕ್ತಿ ಇರುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಸಭಾ ಭವನದಲ್ಲಿ ಶನಿವಾರ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಚನ್ನಬಸವೇಶ್ವರ ಗುರುಕುಲ ಕರಡ್ಯಾಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರ ಮಾಲೆ ಚನ್ನಬಸವ ಪಟ್ಟದ್ದೇವರ ಹಾಗೂ ಪ್ರಭುರಾವ್ ಕಂಬಳಿವಾಲೆ ಅವರ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮಹಾತ್ಮರ ಕುರಿತಾದ ಪುಸ್ತಕಗಳಲ್ಲಿ ಅಡಗಿರುವ ಜೀವನ ಸಂದೇಶ, ಅನುಭವ ಓದುಗರ ಜೀವನದಲ್ಲಿ ಬಹುದೊಡ್ಡ ಪರಿವರ್ತನೆ ತರುತ್ತವೆ. ಆ ಮೂಲಕ ಸುಂದರ ಸಮಾಜ ನಿರ್ಮಿಸಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ಉತ್ತಮ ಸಾಹಿತ್ಯಕ್ಕೆ ಓದುಗರನ್ನು ತನ್ನತ್ತ ಆಕರ್ಷಿಸುವ ಅದ್ಭುತ ಶಕ್ತಿ ಇರುತ್ತದೆ. ಚನ್ನಬಸವ ಪಟ್ಟದ್ದೇವರ ಹಾಗೂ ಪ್ರಭುರಾವ್ ಕಂಬಳಿವಾಲೆ ಅವರ ಪುಸ್ತಕಗಳು ನಾಡು, ನುಡಿ, ಭಾಷೆ, ಇತಿಹಾಸ ಹಾಗೂ ಆಧ್ಯಾತ್ಮದ ಚಿಂತನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅತ್ಯಮೂಲ್ಯ ಗ್ರಂಥಗಳಾಗಿವೆ ಎಂದು ಹೇಳಿದರು.
ಧಾರವಾಡದ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ರಂಜಾನ್ ದುರ್ಗಾ ಮಾತನಾಡಿ, ಚನ್ನಬಸವ ಪಟ್ಟದೇವರು ಗುರುಗಳಲ್ಲಿಯೇ ಶ್ರೇಷ್ಠ, ಮಾದರಿ ಗುರುವಾಗಿದ್ದರು. ಪ್ರಭುರಾವ್ ಕಂಬಳಿವಾಲೆ ಅವರು ಸಾಮಾಜಿಕ ಸೇವೆ ಸಲ್ಲಿಸಿದವರಲ್ಲಿ ಹೆಸರು ವಾಸಿಯಾಗಿದ್ದಾರೆ. ಈ ಇಬ್ಬರು ಮಹನೀಯರ ಪುಸ್ತಕ ಲೋಕಾರ್ಪಣೆ ಆಗುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿAಗ ಕಾಮಣ್ಣ ಪುಸ್ತಕಗಳ ಪರಿಚಯ ಮಾಡಿಕೊಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಚನ್ನಬಸವ ಪಟ್ಟದ್ದೇವರು ಪುಸ್ತಕ ರಚಿಸಿದ ಸಾಹಿತಿ ಸೋಮನಾಥ ನುಚ್ಚಾ, ಪ್ರಭುರಾವ್ ಕಂಬಳಿವಾಲೆ ಪುಸ್ತಕ ರಚಿಸಿದ ಸಾಹಿತಿ ಜಯಶ್ರೀ ಸುಕಾಲೆ ಮಾತನಾಡಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು.































