
ಕಲಬುರಗಿ, ಜೂ 22: ಮಾನವನ ದೇಹವೇ ಪ್ರಕೃತಿಯ ಅದ್ಭುತ ಸೃಷ್ಟಿಯಾಗಿದ್ದು, ಅದರ ಆರೋಗ್ಯದ ಕೀಲಿಕೈ ಯೋಗದಲ್ಲಿದೆ ಎಂದು ಯೋಗ ಸಂಶೋಧಕ ಭೀಮಾಶಂಕರ ಬೆನಕನಹಳ್ಳಿ ಅವರು ಅಭಿಪ್ರಾಯಪಟ್ಟರು.
ನಗರದ ಭಾರತೀಯ ವಿದ್ಯಾಕೇಂದ್ರದಲ್ಲಿ ಭಾರತೀಯ ವಿದ್ಯಾಕೇಂದ್ರ ವಿಶ್ವಸ್ಥ ಮಂಡಳಿ, ಕಲಬುರಗಿ ಸಂಚಾಲಿತ ಮಾತೃಶ್ರೀ ಸಂಗಮ್ಮ ಶಿವಶರಣಪ್ಪ ಪಾಟೀಲ (ಕಡಗಂಚಿ) ಬಾಲಕರ ನಿಲಯ ಪ್ರೌಢಶಾಲೆ ಹಾಗೂ ಮಾತೃಶ್ರೀ ಸಂಘವಿ ಮರಗಾಬಾಯಿ ಬಾಬುಲಾಲ್ ಜೈನ್ (ಶಹಾಪುರ) ನಿಲಯ ಹಿರಿಯ ಪ್ರಾಥಮಿಕ ಶಾಲೆ, ಸಿರನೂರ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಆಧುನಿಕ ಜೀವನದ ಒತ್ತಡ, ಆತಂಕ ಮತ್ತು ಅನಾರೋಗ್ಯದ ನಡುವೆಯೂ ದೇಹ, ಮನಸ್ಸು ಹಾಗೂ ಆತ್ಮದ ಸಮತೋಲನವನ್ನು ಸಾಧಿಸುವ ಮಹಾನ್ ಜೀವನ ವಿಜ್ಞಾನವೇ ಯೋಗವಾಗಿದೆ ಎಂದು ಅವರು ಹೇಳಿದರು. ಯೋಗವೆಂದರೆ ಕೇವಲ ಆಸನಗಳ ಪ್ರದರ್ಶನವಲ್ಲ; ಅದು ಮನುಷ್ಯನನ್ನು ತನ್ನೊಳಗಿನ ಶಕ್ತಿಯೊಂದಿಗೆ ಜೋಡಿಸುವ ಆತ್ಮಸಾಕ್ಷಾತ್ಕಾರದ ಪಯಣವಾಗಿದೆ ಎಂದು ತಿಳಿಸಿದರು.
ಮಾನವನ ದೇಹದಲ್ಲಿರುವ ಎಲ್ಲಾ ರಕ್ತನಾಳಗಳನ್ನು ಒಂದರ ಪಕ್ಕ ಒಂದು ಜೋಡಿಸಿದರೆ ಅವು ಸುಮಾರು ಒಂದು ಲಕ್ಷ ಕಿಲೋಮೀಟರ್ ಉದ್ದವಿರುತ್ತವೆ. ಇದು ಭೂಮಿಯ ಸುತ್ತಳತೆಯನ್ನು ಎರಡು ಬಾರಿ ಮೀರಿ ಸುತ್ತುವಷ್ಟು ದೂರವಾಗಿದ್ದು, ಇಂತಹ ಸಂಕೀರ್ಣ ದೇಹ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಯೋಗದಂತಹ ಸಮಗ್ರ ಜೀವನಶೈಲಿ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಹೃದಯವು ಕ್ಷಣಮಾತ್ರವೂ ವಿಶ್ರಾಂತಿ ಪಡೆಯದೆ ನಿರಂತರವಾಗಿ ರಕ್ತವನ್ನು ಪಂಪ್ ಮಾಡುತ್ತಿರುತ್ತದೆ. ಈ ನಿರಂತರ ಚಲನೆಯಲ್ಲಿ ದೇಹದ ಆರೋಗ್ಯ, ಮನಸ್ಸಿನ ನೆಮ್ಮದಿ ಹಾಗೂ ಜೀವನದ ಉತ್ಸಾಹವನ್ನು ಉಳಿಸಿಕೊಳ್ಳಲು ಯೋಗವು ಅಮೃತದಂತೆ ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಯೋಗವು ವೇದಗಳು ಮತ್ತು ಉಪನಿಷತ್ತುಗಳಲ್ಲಿ ಉಲ್ಲೇಖಗೊಂಡಿದೆ. ಭಾರತದ ಋಷಿಮುನಿಗಳ ತಪಸ್ಸಿನ ಫಲವಾಗಿರುವ ಯೋಗಕ್ಕೆ ಇಂದು ವಿಶ್ವಮಟ್ಟದಲ್ಲಿ ಅಪಾರ ಮಾನ್ಯತೆ ದೊರೆತಿದ್ದು, ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 177 ರಾಷ್ಟ್ರಗಳು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಬೆಂಬಲ ಸೂಚಿಸಿರುವುದು ಯೋಗದ ಸಾರ್ವತ್ರಿಕ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಯೋಗದಲ್ಲಿ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ, ರಾಜಯೋಗ, ಹಠಯೋಗ, ಮಂತ್ರಯೋಗ ಹಾಗೂ ಕುಂಡಲಿನಿ ಯೋಗ ಸೇರಿದಂತೆ ಅನೇಕ ಮಾರ್ಗಗಳಿವೆ. ನಿಸ್ವಾರ್ಥ ಸೇವೆಯೇ ಕರ್ಮಯೋಗದ ಮೂಲವಾಗಿದ್ದರೆ, ಭಕ್ತಿಯ ಮೂಲಕ ಮನಸ್ಸಿನ ಪರಿಶುದ್ಧತೆಯನ್ನು ಸಾಧಿಸುವುದು ಭಕ್ತಿಯೋಗದ ಉದ್ದೇಶವಾಗಿದೆ. ಜ್ಞಾನಯೋಗವು ಸತ್ಯ ಮತ್ತು ಆತ್ಮಜ್ಞಾನದ ಅರಿವನ್ನು ಮೂಡಿಸಿದರೆ, ರಾಜಯೋಗವು ಧ್ಯಾನ ಮತ್ತು ಏಕಾಗ್ರತೆಯ ಮೂಲಕ ಆಂತರಿಕ ಶಾಂತಿಗೆ ದಾರಿ ತೋರಿಸುತ್ತದೆ ಎಂದು ವಿವರಿಸಿದರು.
ಹಠಯೋಗವು ದೇಹವನ್ನು ಸದೃಢಗೊಳಿಸಿ ಮನಸ್ಸನ್ನು ಸ್ಥಿರಗೊಳಿಸಿದರೆ, ಮಂತ್ರಯೋಗವು ಜಪದ ಶಕ್ತಿಯ ಮೂಲಕ ಚಿತ್ತಶುದ್ಧಿಯನ್ನುಂಟು ಮಾಡುತ್ತದೆ. ಕುಂಡಲಿನಿ ಯೋಗವು ಮನುಷ್ಯನೊಳಗಿನ ಸುಪ್ತ ಶಕ್ತಿಯನ್ನು ಜಾಗೃತಗೊಳಿಸಿ ಉನ್ನತ ಚೈತನ್ಯದತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.
“ಯೋಗವು ರೋಗದಿಂದ ಮುಕ್ತಿ ನೀಡುವುದಷ್ಟೇ ಅಲ್ಲ, ಭೋಗ ಮತ್ತು ಯೋಗದ ನಡುವೆ ಸಮತೋಲನ ಕಲಿಸುವ ಜೀವನ ದರ್ಶನವಾಗಿದೆ. ದೇಹಕ್ಕೆ ಆರೋಗ್ಯ, ಮನಸ್ಸಿಗೆ ಪ್ರಶಾಂತತೆ ಮತ್ತು ಆತ್ಮಕ್ಕೆ ದಿವ್ಯತೆಯನ್ನು ನೀಡುವ ಅದ್ಭುತ ಸಾಧನೆಯೇ ಯೋಗ” ಎಂದು ಭೀಮಾಶಂಕರ ಬೆನಕನಹಳ್ಳಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಹಿರಿಯ ಸದಸ್ಯ ಚನ್ನವೀರಪ್ಪ ಗುಡ್ಡಾ, ದೈಹಿಕ ಶಿಕ್ಷಕ ಜಲಂಧರವಾಡಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿದಾನಂದ ಬಳ್ಳೂರ್ಗಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಶಿರ್ಷಾಡ ಸೇರಿದಂತೆ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಆಡಳಿತಾಧಿಕಾರಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಯೋಗಾಸನ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಕುಕ್ಕಾಟಾಸನ, ಧನುರಾಸನ, ಶೀರ್ಷಾಸನ ಹಾಗೂ ಅಕರ್ಣಾಸನ ಸೇರಿದಂತೆ ಹಲವು ಯೋಗ ಭಂಗಿಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದ ವಿದ್ಯಾರ್ಥಿಗಳ ಪ್ರತಿಭೆ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಅವರ ಯೋಗ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಯೋಗದ ಮಹತ್ವವನ್ನು ಪರಿಣಾಮಕಾರಿಯಾಗಿ ಬಿಂಬಿಸಿತು.































