
ಸಂಜೆವಾಣಿ ವಾರ್ತೆ
ಹೊಸಪೇಟೆ. ಜೂ.8- ಬಾಗಲಕೋಟೆ ಜಿಲ್ಲೆ ಹುನಗುಂದ ಕ್ಷೇತ್ರದ ಶಾಸಕ ಡಾ.ವಿಜಯಾನಂದ ಕಾಶಪ್ಪ ನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಅಭಿಮಾನಿಗಳು ಹಾಗೂ ವೀರಶೈವ ಸಮಾಜದ ಬಂಧುಗಳು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿಂದು ವಿಶೇಷ ಪೂಜೆ ಸಲ್ಲಿಸಿದರು.
ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ವೀರಶೈವ ಸಮಾಜದ ಹಿರಿಯ ಮುಖಂಡರು ಆಗಿರುವ ಹುನಗುಂದ ಶಾಸಕ ಡಾ.ವಿಜಯಾನಂದ ಕಾಶಪ್ಪ ನವರಿಗೆ ಎರಡನೇ ಕಂತಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ, ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಸಮಾಜದ ಮುಖಂಡ ವಿರೇಶ್ವರ ಎಂ.ಬಿ, ವಿಜಯಾನಂದ ಕಾಶಪ್ಪ ನವರು ವೀರಶೈವ ಸಮಾಜದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಾಗಿದ್ದಾರೆ.ಅಲ್ಲದೆ ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ. ಕ್ಷೇತ್ರದ ಹಾಗೂ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಅವರಿಗೆ ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೂ ಹಾಗೂ ಸಮಾಜಕ್ಕೂ ಆನೆ ಬಲ ಬಂದಂತಾಗುತ್ತದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಾಶಪ್ಪ ನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಶಪ್ಪನವರ ಅಭಿಮಾನಿಗಳಾದ ಮಂಜುನಾಥ ನಿಟ್ಟಳ್ಳಿ, ನಾಗರಾಜ ಕುಕನಪಳ್ಳಿ, ಮಲ್ಲಿಕಾರ್ಜುರ, ವೀರಭದ್ರಪ್ಪ, ಶರಣಪ್ಪ ತಟ್ಟಿ, ಕೊಟ್ಟೂರೇಶ್ವರ, ರಾಜು, ಚಂದ್ರಶೇಖರ್, ವಿಕ್ರಂ, ಶ್ರೀಕಾಂತ, ಮನ್ಸೂರು ಇದ್ದರು.































