
ಬೆಂಗಳೂರು.ಜೂ೬: ಸಚಿವ ರಾಮಲಿಂಗಾರೆಡ್ಡಿ ಅವರ ಅಸಮಾಧಾನದ ಜಟಾಪಟಿ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, “ಇದೇನು ಅಷ್ಟು ದೊಡ್ಡ ವಿಚಾರವಲ್ಲ, ಪಕ್ಷದ ಹಿರಿಯ ಮುಖಂಡರು ಶೀಘ್ರದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಎದ್ದಿರುವ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.”ನಿನ್ನೆ ತಾನೇ ಮುಖ್ಯಮಂತ್ರಿಗಳು ರಾಮಲಿಂಗಾರೆಡ್ಡಿ ಅವರ ಜೊತೆಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಸದ್ಯದಲ್ಲೇ ಎಲ್ಲ ಸಮಸ್ಯೆಗಳು ಸುಖಾಂತ್ಯ ಕಾಣಲಿವೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತ ಉಳಿಯುವುದಿಲ್ಲ” ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಇದೇ ವೇಳೆ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಮುನಿಯಪ್ಪ ಅವರಿಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ನಿನ್ನೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಬಂದಿದ್ದಾಗ, ಮುನಿಯಪ್ಪ ಅವರು ನಮ್ಮ ಜೊತೆಯಲ್ಲೇ ಕುಳಿತು ಸುದೀರ್ಘವಾಗಿ ಚರ್ಚಿಸಿದ್ದಾರೆ. ಹಾಗಾಗಿ ಅವರ ಮುನಿಸಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದರು.
ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿರುವ ನಿರಂತರ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, “ರಾಜಕಾರಣದಲ್ಲಿ ಇವೆಲ್ಲವೂ ಸರ್ವೇಸಾಮಾನ್ಯ. ವಿಪಕ್ಷಗಳ ಕೆಲಸವೇ ಟೀಕೆ ಮಾಡುವುದು. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಗಮನವೇನಿದ್ದರೂ ಅಭಿವೃದ್ಧಿಯ ಕಡೆಗೆ ಮಾತ್ರ” ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.




























