
ಸಂಜೆವಾಣಿ ವಾರ್ತೆ
ವಿಜಯಪುರ, ಜು.೧೧: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ ಆನ್‌ಲೈನ್ ಮೂಲಕ ವರ್ಗಾವಣೆ ಪತ್ರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ನಡುವೆ ಇರುವ ತಾರತಮ್ಯವನ್ನು ತಕ್ಷಣ ನಿವಾರಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘವು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿತು.
ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಪೂಜಾರಿ ಮಾತನಾಡಿ, ಪ್ರತಿ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಪಾಲಕರ ಇಚ್ಛೆಯಂತೆ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಳ್ಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಸರ್ಕಾರ ಆನ್‌ಲೈನ್ ವರ್ಗಾವಣೆ ಪತ್ರ ವ್ಯವಸ್ಥೆಯನ್ನು ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಅನ್ಯಾಯವಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಹೆಸರು ಆನ್‌ಲೈನ್‌ನಲ್ಲಿ ಇನ್ನೂ ಸರ್ಕಾರಿ ಶಾಲೆಯಲ್ಲಿಯೇ ತೋರಿಸುತ್ತಿರುವುದರಿಂದ ಉಚಿತ ಬಸ್ ಪಾಸ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಪ್ರವೇಶ, ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಮುರಾರ್ಜಿ ದೇಸಾಯಿ, ಕಸ್ತೂರಬಾ ಗಾಂಧಿ, ಆದರ್ಶ ವಿದ್ಯಾಲಯಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೂ ಸರ್ಕಾರಿ ಶಾಲೆಗಳಿಂದ ಆನ್‌ಲೈನ್ ವರ್ಗಾವಣೆ ಪತ್ರ ಸಿಗದಿರುವುದು ಪಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಉದ್ಯೋಗ ಅಥವಾ ಇತರ ಕಾರಣಗಳಿಂದ ಬೇರೆ ಊರಿಗೆ ಸ್ಥಳಾಂತರಗೊಳ್ಳುವ ಕುಟುಂಬಗಳ ಮಕ್ಕಳಿಗೂ ಇದೇ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ವರ್ಗಾವಣೆಯಾಗದಂತೆ ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ಈ ಸಮಸ್ಯೆಯನ್ನು ಸರ್ಕಾರ ತಕ್ಷಣ ಪರಿಹರಿಸದಿದ್ದರೆ, ರಾಜ್ಯಾದ್ಯಂತ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡುವುದನ್ನು ಸ್ಥಗಿತಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅದರ ಸಂಪೂರ್ಣ ಹೊಣೆ ಸರ್ಕಾರದ್ದೇ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಪ್ರಾಣೇಶ್ ಜೋಶಿ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ತುಪ್ಪದ್, ಶ್ರೀಶೈಲ್ ಪಾರಗೋಡ, ಮಲ್ಲಿಕಾರ್ಜುನ ಆಸಂಗಿ, ನಾನಾಗೌಡ ಪಾಟೀಲ, ಮಹಾಂತೇಶ ಜಾಲವಾದಿ, ಕಾರ್ಯದರ್ಶಿ ಲಕ್ಷ್ಮೀಕಾಂತ ಮಾನೆ, ಆರ್.ಎಸ್. ಬಿರಾದಾರ್, ಸಿ.ಎಂ. ಹವಾಲ್ದಾರ್, ಎಸ್.ಬಿ. ಮಮದಾಪುರ, ಆರ್.ಜಿ. ಬಿರಾದಾರ್, ಎಲ್.ಬಿ. ಪಾಟೀಲ, ರವಿಚಂದ್ರ ಪತ್ತಾರ, ಸಿ.ಎಸ್. ಅವಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.































