Home ಜಿಲ್ಲೆ ಮಂಗಳೂರು ಮನದ ‘ಬಿಂಬ’ಕ್ಕೆ ಕಲಾ ‘ಪ್ರತಿಬಿಂಬ’ ಚಿತ್ರಗಳಿಗೆ ಜೀವ ತುಂಬುವ ಕಲಾವಿದೆ ‘ನಿಲಿಷ್ಕಾ ಕಲ್ಪನೆ’

ಮನದ ‘ಬಿಂಬ’ಕ್ಕೆ ಕಲಾ ‘ಪ್ರತಿಬಿಂಬ’ ಚಿತ್ರಗಳಿಗೆ ಜೀವ ತುಂಬುವ ಕಲಾವಿದೆ ‘ನಿಲಿಷ್ಕಾ ಕಲ್ಪನೆ’

ಪುತ್ತೂರು; ಮನದಲ್ಲಿ ಮೂಡಿದ ಬಿಂಬಗಳಿಗೆ ಕೈಚಳಕದ ಮೂಲಕ ಸಿಂಗಾರದ ಪ್ರತಿಬಿಂಬ ಮೂಡಿಸುವುದು ಸುಲಭ ಸಾಧ್ಯವಾದ ಕೆಲಸವಲ್ಲ. ಆದರೆ ಈ ಚಿತ್ರಗಾರ್ತಿಗೆ ಅದು ಕಷ್ಟವೇ ಅಲ್ಲ. ಮನಸ್ಸಿನಲ್ಲಿ ಮೂಡುವ ರಂಗುಗಳಿಗೆ ಬಣ್ಣದ ಅರ್ಥ ಕೊಡುವ ಕಲೆ ಈಕೆಗೆ ಕರತಲಾಮಲಕ. ವೀಕ್ಷಕರು ನೋಡುತ್ತಿರುವಂತೆ ಲೈವ್‌ನಲ್ಲಿಯೇ ಚಿತ್ರ ಬರೆದು ನೋಡುಗರಲ್ಲಿ ಬೆರಗು ಮೂಡಿಸುವ ಚಾಕಚಕ್ಯತೆಗೆ ಹೆಸರೇ ನಿಲಿಷ್ಕಾ ಕಲ್ಪನೆ..


ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಪುತ್ತೂರಿನ ಈ ಪ್ರತಿಭೆಗೆ ಈಗಾಗಲೇ ರಾಜ್ಯಮಟ್ಟದಲ್ಲಿ ಅನೇಕ ಬಹುಮಾನಗಳು ಸಂದಿವೆ. ಎಳವೆಯಲ್ಲಿಯೇ ಚಿತ್ರಗಳತ್ತ ಆಕರ್ಷಿತಳಾದ ನಿಲಿಷ್ಕಾ ಕಲ್ಪನೆಗೆ ಎಟುಕದ ವಿಚಾರಗಳಿಲ್ಲ. ಪ್ರಕೃತಿ, ಪರಿಸರ, ವ್ಯಕ್ತಿ ಚಿತ್ರ, ವಿಜ್ಞಾನಚಿತ್ರ ಸಹಿತ ಪೆನ್ಸಿಲ್ ಶೇಡಿಂಗ್, ಕ್ರಯಾನ್ಸ್, ವರ್ಣಚಿತ್ರ, ವಸ್ತುಚಿತ್ರ, ಅಲಂಕಾರಿಕಾ ಚಿತ್ರಗಳಿಗೆ ತೈಲವರ್ಣ, ಜಲವರ್ಣಗಳ ಮೂಲಕ ಜೀವ ತುಂಬುವ ಈಕೆಯದ್ದು ಅಸಾಧಾರಣ ಪ್ರತಿಭೆ. ತನ್ನ ಕಲಾಪ್ರತಿಭೆಗೆ ನೂರಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದುಕೊಂಡಿರುವ ನಿಲಿಷ್ಕಾ ಅವರ ಕನಸು ದೇಶದ ಅತ್ಯುತ್ತಮ ಚಿತ್ರಗಾರ್ತಿಯಾಗುವುದು. ಅದಕ್ಕೆ ಪೂರಕವಾದ ಪ್ರತಿಭೆ ಈಕೆಯ ಜತೆಗಿದೆ. ತಾಯಿ ಸಂಜಯನಗರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಸ್ಮಿತಾ. ತಂದೆ ಸಿವಿಲ್ ಇಂಜಿನಿಯರ್ ದಿನೇಶ್. ಮನೆಯ ಗರಡಿ ಈಕೆಯ ಕಲಾಪ್ರತಿಭೆ ಅರಳಲು ಅತ್ಯುತ್ತಮ ತಾಣವಾಗಿತ್ತು. ಈ ಪ್ರತಿಭೆಗೆ ಸಾಣೆ ಹಿಡಿದು ಕಲಾಚೌಕಟ್ಟು ನೀಡಿರುವುದು ಪುತ್ತೂರಿನ ಪ್ರತಿಷ್ಠಿತ ಕಲಾ ಶಾಲೆ ತತ್ವ ಸ್ಕೂಲ್ ಆಫ್ ಆರ್ಟ್ಸ್ ಇದರ ಸಂಚಾಲಕ ಕಲಾಶಿಕ್ಷಕ ಟೀಲಾಕ್ಷ ಮತ್ತು ಚಿತ್ರಕಲಾ ಶಿಕ್ಷಕಿ ರಶ್ಮಿ ಶೆಟ್ಟಿ.
ಕರ್ನಾಟಕ ಸರ್ಕಾರ ನಡೆಸುವ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಉನ್ನತಶ್ರೇಣಿ ಪಡೆದ ತೇರ್ಗಡೆಯಾಗಿರುವ ನಿಲಿಷ್ಕಾ ಕಲ್ಪನೆ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ವತಿಯಿಂದ ನಡೆದ ರಾಜ್ಯಮಟ್ಟದ ಕಲಾ ಸ್ಪರ್ಧೆಯಲ್ಲಿ ಸತತ ೩ ಬಾರಿ ಮೊದಲ ಸ್ಥಾನಿ. ಮಂಗಳೂರಿನಲ್ಲಿ ತತ್ವ ಸ್ಕೂಲ್ ಆಫ್ ಆರ್ಟ್ಸ್ ಪುತ್ತೂರು ವತಿಯಿಂದ ಕಲಾಚಿತ್ರ ಪ್ರದರ್ಶನ. ಡಾ.ಶಿವರಾಮ ಕಾರಂತ ಜನ್ಮದಿನಾಚರಣೆ ಸಂದರ್ಭ ಚಿತ್ರಕಲಾ ಪ್ರದರ್ಶನ ಸಹಿತ ಕಾಸರಗೋಡು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಚಿತ್ರಪ್ರದರ್ಶನ ಮಾಡಿರುವುದು, ಅಪರೂಪದ ಪ್ರಶಸ್ತಿಯಾದ ಕಲಾಕಾರ್ ಪುರಸ್ಕಾರ, ಶಿಕ್ಷಣ ಇಲಾಖೆ ನಡೆಸುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಬಹುಮಾನ ಹೀಗೆ ಈಕೆಯ ಸಾಧನೆಯ ಹೆಜ್ಜೆಗಳು ಮುಂದುವರಿಯುತ್ತವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕ ಸಚಿವಾಲಯದ ಕಲಾಶ್ರೀ ಪ್ರಶಸ್ತಿಯಲ್ಲಿಯೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹೆಗ್ಗಳಿಕೆ ನಿಲಿಷ್ಕಾ ಕಲ್ಪನೆಯವರದ್ದಾಗಿದೆ.
ನಿಲಿಷ್ಕಾ ಕಲ್ಪನೆ ಕನಸಿಗೆ ಮತ್ತೊಂದು ಗರಿ


೮೦ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಮಂಗಳೂರಿನ ರೋಶನ್ ಕಾರ್ಪೋರೇಷನ್ ಆಯೋಜಕತ್ವದಲ್ಲಿ ಫಿಕ್ಸೆನ್ಸಿಲ್ ಚಿತ್ರಕಲಾ ಶಾಲಾ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ‘ನನ್ನ ಕನಸಿನ ಭಾರತ’ ಧ್ಯೇಯದಡಿ ಫ್ರೀಡಂ ಪ್ಯಾಲೇಟ್ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮೊದಲ ಸ್ಥಾನಿಯಾಗಿ ೨೫ ಸಾವಿರ ಬಹುಮಾನ ಪಡೆದ ಹೆಮ್ಮೆ ನಿಲಿಷ್ಕಾ ಕಲ್ಪನೆಯವರದ್ದಾಗಿದೆ. ಈ ಸ್ಪರ್ಧೆಗೆ ದೇಶದ ವಿವಿಧ ಕಡೆಗಳಿಂದ ಸುಮಾರು ೨೮೦೦ ಚಿತ್ರಗಳು ಬಂದಿದ್ದು, ಅದರಲ್ಲಿ ೩೦೦ ಚಿತ್ರಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. ೨ನೇ ಸುತ್ತಿನಲ್ಲಿ ೬೦ ಚಿತ್ರಗಳನ್ನು ಆಯ್ಕೆ ಮಾಡಿ ಈ ಸ್ಪರ್ಧಿಗಳಿಗೆ ಸ್ಥಳದಲ್ಲಿಯಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಸಲಾಗಿತ್ತು. ನಿಲಿಷ್ಕಾ ಕಲ್ಪನೆ ಅವರ ‘ಕಲ್ಪನೆ’ಯಲ್ಲಿ ಮೂಡಿಬಂದ ‘ಕರಾವಳಿ ಸ್ವಾತಂತ್ರ್ಯ ಸಂಗ್ರಾಮ’ ಚಿತ್ರ ಮೊದಲ ಬಹುಮಾನಕ್ಕೆ ಆಯ್ಕೆಯಾಗಿತ್ತು.

ಪ್ರತಿಭೆಗೆ ಒರೆಹಚ್ಚುವ ಕೆಲಸ..
ಪುತ್ತೂರಿನ ತತ್ವ ಸ್ಕೂಲ್ ಆಫ್ ಆರ್ಟ್ಸ್‌ಗೆ ಆಕೆ ಕಾಲಿಟ್ಟಾಗ ಆಕೆಯ ವಯಸ್ಸು ಕೇವಲ ೪ ವರ್ಷ. ನಿಲಿಷ್ಕಾಳಲ್ಲಿ ಪ್ರತಿಭೆ ಇತ್ತು. ಅದಕ್ಕೆ ಒರೆ ಹಚ್ಚುವ ಕೆಲಸ ನಾವು ಮಾಡಿದ್ದೇವೆ. ವಯಸ್ಸಿಗೆ ಮೀರಿದ ಪ್ರತಿಭೆಯಿದ್ದ ಕಾರಣ ಆಕೆಯ ಗೆಲುವಿನ ಹೆಜ್ಜೆ ಸುಲಭವಾಯಿತು. ಚಿತ್ರಕಲೆಯ ಬೇರೆ ಬೇರೆ ವಿಭಾಗಗಳನ್ನು ಆಕೆಗೆ ಪರಿಚಯಿಸಿದ್ದೇವೆ. ಶ್ರಮ, ಆಸಕ್ತಿ ಮತ್ತು ತಾಳ್ಮೆ ಚಿತ್ರ ಕಲೆಗೆ ಅತೀ ಮುಖ್ಯ. ಚಿತ್ರಕಲೆ ಒಳ್ಳೆಯ ಭವಿಷ್ಯ ಇರುವ ನಿಲಿಷ್ಕಾ ಚಿತ್ರಕಲೆಯಲ್ಲಿ ಅಕಾಡೆಮಿಕ್ ಶಿಕ್ಷಣ ಪಡೆಯಬೇಕು. ಅದು ಆಕೆಯ ಭವಿಷ್ಯದ ದೃಷ್ಟಿಯಿಂದ ಅತೀ ಅಗತ್ಯ. ಕಾಲ ಹಿಂದಿನಂತಿಲ್ಲ. ಈಗ ಚಿತ್ರಕಲೆಗೂ ಭರಪೂರ ಅವಕಾಶಗಳಿವೆ. ಸ್ಕಿಲ್ ಮತ್ತು ಆಸಕ್ತಿ ಇದ್ದವರು ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಾರೆ. ಅಂತಹ ಅವಕಾಶ ಹಾಗೂ ಭವಿಷ್ಯ ನಿಲಿಷ್ಕಾ ಕಲ್ಪನೆ ಅವರಿಗೂ ಇದೆ-
ಟೀಲಾಕ್ಷ ಕಲಾ ಶಿಕ್ಷಕ ತತ್ವ ಸ್ಕೂಲ್ ಆಫ್ ಆರ್ಟ್ಸ್ ಪುತ್ತೂರು

ಎಂಪಿ ಪುತ್ತೂರು