
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಅ.04: ಸರ್ಕಾರಿ ಕಚೇರಿಗಳಿಗೆ ಜನರು ಅಲೆಯುವ ಬದಲು, ಸರ್ಕಾರವೇ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ, ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ತಲುಪಿಸುವುದು ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಪಟ್ಟಣದ ಹರವೆ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಅಭಿಯಾನವು ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಿ ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ. ಜನಕೇಂದ್ರಿತ ಆಡಳಿತ, ತ್ವರಿತ ಸೇವೆ ಮತ್ತು ಸಮಗ್ರ ಅಭಿವೃದ್ಧಿಯ ಮೂಲಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ಸರ್ಕಾರದ ಬದ್ಧತೆಯಾಗಿದೆ.ಸರ್ಕಾರದ ಸೇವೆಗಳನ್ನು ಸುಲಭವಾಗಿ ಜನರಿಗೆ ತಲುಪಿಸುವ ಸೇವಾ ಒನ್ ಪೋರ್ಟಲ್, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಯುವಜನರ ಅಭಿವೃದ್ಧಿಗಾಗಿ ಭಾರತ್ ಜೋಡೋ ಸಂಘಗಳು, ರೈತರಿಗಾಗಿ ‘ನೇಗಿಲ ಯೋಗಿ’ ಮತ್ತು ‘ರೈತ ಚೈತನ್ಯ’ ಕಾರ್ಯಕ್ರಮಗಳು, ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 5 ಲಕ್ಷ ನಿವೇಶನಗಳ ಹಂಚಿಕೆ ಹಾಗೂ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಮೂಲಕ ಜನರಲ್ಲಿ ಶಕ್ತಿ ನೀಡುವ ಕೆಲಸವನ್ನು ಮಾಡುತ್ತೇವೆ ಪ್ರಜಾ ಸೇವೆ ಆಂದೋಲನ ಮಾಡಿದ ಆರಂಭದಿಂದ ಇಲ್ಲಿವರೆಗೂ ಸರಿಸುಮಾರು ಒಂದು ಲಕ್ಷ ಅರ್ಜಿಗಳಿಗೆ ಉತ್ತರಿಸಲಾಗಿದೆ ಕಂದಾಯ ಆರ್ ಡಿ ಪಿ ಆರ್ ಪೊಲೀಸ್ ಇಲಾಖೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚು ಬಂದಿದು ಪ್ರತಿ ಅರ್ಜಿಗಳಿಗೂ ಉತ್ತರ ನೀಡುವ ಕೆಲಸವನ್ನು ಮಾಡುತ್ತೇವೆ ಅದನ್ನು ನಾನು ಮತ್ತು ನನ್ನ ಇಲಾಖೆ ಹತ್ತಿರದಿಂದ ಗಮನಿಸುವ ಮೂಲಕ ಉತ್ತರವನ್ನು ಸಹ ನೀಡುತ್ತೇವೆ. ಇದಕ್ಕೆ ಪರಿಹಾರವನ್ನು ನೀಡುವ ಕೆಲಸವನ್ನು ಮಾಡುತ್ತೇವೆ ಸರ್ಕಾರಿ ಸ್ಥಳಗಳನ್ನು ಹುಡುಕಿ ವಸತಿ ಇಲ್ಲದವರಿಗೆ ವಸತಿ ನಿರ್ಮಿಸುವ ಕೆಲಸವನ್ನು ಸಹ ನಮ್ಮ ಸರ್ಕಾರ ಮಾಡುತ್ತಿದೆ ಇದಕ್ಕಾಗಿ ಸರ್ಕಾರಿ ಜಾಗಗಳನ್ನು ಗುರುತಿಸುವ, ಸರ್ಕಾರಿ ಜಾಗ ಇಲ್ಲದೆ ಇರುವ ಕಡೆ ಖಾಸಗಿ ವ್ಯಕ್ತಿಗಳಿಂದ ಜಮೀನು ಕೊಂಡುಕೊಂಡು ವಸತಿ ರೈತರಿಗೆ ಮನೆ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಮಾತನಾಡಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಜಲ ಸಂಕಷ್ಟ ಅರಿತು ಮುಂಬರುವ ಮೇ ತಿಂಗಳವರೆಗೆ ಗ್ರಾಮೀಣ ಪ್ರದೇಶದಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಮನಗಂಡು ಈಗಿನಿಂದಲೇ ಯೋಜನೆ ರೂಪಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಹಣದ ಕೊರತೆ ಇಲ್ಲ
ಯಾವುದೇ ಗ್ರಾಮದಲ್ಲಿ ಕೊಳವೆ ಬಾವಿ ಬತ್ತಿ ಹೋಗಿದ್ದರೆ, ನೀರು ಪೂರೈಕೆಯಲ್ಲಿ ಅಡಚಣೆ ಆಗಿದ್ದರೆ 24 ಗಂಟೆಗಳ ಒಳಗಾಗಿ ನೀರಿನ ಸಮಸ್ಯೆ ಪರಿಹರಿಸುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಬರ ಪರಿಸ್ಥಿತಿಯ ಸಂದರ್ಭದಲ್ಲಿ ಯಾರೂ ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗದಂತೆ ತಡೆಯಲು ಗ್ರಾಮೀಣ ಉದ್ಯೋಗ ಖಾತ್ರಿ ವಿಬಿಜಿ ರಾಮ್ ಜಿ ಅಡಿ ಇರುವಲ್ಲೇ ಕೆಲಸ ನೀಡಲಾಗುತ್ತಿದೆ.ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದು, ಜನ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಆರ್ಥಿಕ ಶಕ್ತಿ ನೀಡಲು ನಮ್ಮ ಗ್ಯಾರಂಟಿಗಳು ಆಸರೆಯಾಗಿವೆ ಎಂದರು
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ನಗರಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ
ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವ ಕೆ. ವೆಂಕಟೇಶ್, ಶಾಸಕರಾದ ಡಿ. ರವಿಶಂಕರ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಶಿವಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬಣ್ಣ ಮತ್ತು ಅರಗು ನಿಗಮದ ಅಧ್ಯಕ್ಷ ಎಚ್ ಡಿ ಗಣೇಶ್, ಮಾಜಿ ಶಾಸಕಿ ಸುನಿತಾ ವೀರಪ್ಪ ಗೌಡ, ಬೋವಿ ನಿಗಮದ ಅಧ್ಯಕ್ಷ ರಾಮಪ್ಪ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಮೈಸೂರು ಜಿಲ್ಲಾಧಿಕಾರಿ ಲಕ್ಷೀಕಾಂತ್ ರೆಡ್ಡಿ, ಸಿ.ಓ ಮುಖೇಶ್ ಕುಮಾರ್ ಸೇರಿದಂತೆ ರಾಜ್ಯಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
























