
ಆನೇಕಲ್, ಅ. ೪: ಮೇಕೆದಾಟು ಮತ್ತು ಕಳಸಾ-ಬಂಡೂರಿ ಯೋಜನೆಗಳನ್ನು ಕೂಡಲೇ ಆರಂಭಿಸಲು, ಸರ್ಕಾರಿ ಶಾಲೆಗಳನ್ನು ಉಳಿಸಲು, ಮತ್ತು ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ. ೭೫% ಉದ್ಯೋಗ ಮೀಸಲಾತಿಯನ್ನು ಒತ್ತಾಯಿಸಲು, ಅ. ೮ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಮಳೆ ಕಡಿಮೆ ಆಗಿರುವುದರಿಂದ ರೈತರಿಗೆ ಎಕರೆಗೆ ೨೫,೦೦೦ ರೂಪಾಯಿಗಳ ಬೆಳೆ ಪರಿಹಾರ ಹಣವನ್ನು ನೀಡಬೇಕಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯನ್ನು ಕರ್ನಾಟಕ ರಾಜ್ಯದ ಅವಿಭಾಜ್ಯ ಭಾಗವೆಂದು ಘೋಷಿಸಬೇಕು. ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸಬೇಕು. ಕನ್ನಡವನ್ನು ಕಲಿಸದ ಮತ್ತು ನಾಡಗೀತೆ ಹಾಡಿಸದ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಬೇಕು. ಕನ್ನಡ ನಾಮಪಲಕಗಳನ್ನು ಕಡ್ಡಾಯಗೊಳಿಸಬೇಕು. ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆಯನ್ನು ನೀಡಬೇಕು. ಸರ್ಕಾರದ ಎಲ್ಲಾ ಯೋಜನೆಗಳ ಗುತ್ತಿಗೆಗಳನ್ನು ಕನ್ನಡಿಗರಿಗೆ ನೀಡಲೇಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಿಗ ಅಧಿಕಾರಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.





















