Home ಜಿಲ್ಲೆ ಬೆಂಗಳೂರು ಸೇವ್ ಪೋಸ್ಟ್ ಆಫೀಸ್ ಆಂದೋಲನಕ್ಕೆ ಚಾಲನೆ

ಸೇವ್ ಪೋಸ್ಟ್ ಆಫೀಸ್ ಆಂದೋಲನಕ್ಕೆ ಚಾಲನೆ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38;

ಕೆಜಿಎಫ್,ಅ.೪ -ಮಾರಿಕುಪ್ಪಂನಲ್ಲಿ ಹಲವು ದಶಕಗಳಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಅಂಚೆ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಯ ಹಿನ್ನೆಲೆ, ಕಚೇರಿಯನ್ನು ಉಳಿಸಿಕೊಳ್ಳಲು ೧೦ನೇ ವಾರ್ಡ್ನ ಸಮಾಜ ಸೇವಕ ನವೀನ್ ಕುಮಾರ್ ನೇತೃತ್ವದಲ್ಲಿ ಸೇವ್ ಪೋಸ್ಟ್ ಆಫೀಸ್ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.


ಮಾರಿಕುಪ್ಪಂ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ವ್ಯವಹಾರ ಕಡಿಮೆ ಯಾಗಿದೆ ಎಂಬ ಕಾರಣಕ್ಕೆ ಅಂಚೆ ಇಲಾಖೆಯ ಅಧಿಕಾರಿಗಳು ಕಚೇರಿಯನ್ನು ಬೇರೆಡೆಗೆ ವಿಲೀನಗೊಳಿಸುವ ಅಥವಾ ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಸ್ಥಳೀಯ ನಿವಾಸಿಗಳು ಅಂಚೆ ಕಚೇರಿಯಲ್ಲೇ ಖಾತೆ ತೆರೆಯುವ ಮೂಲಕ ಸಾರ್ವಜನಿಕ ವ್ಯವಹಾರವನ್ನು ಹೆಚ್ಚಿಸಲು ಮುಂದಾಗಿದ್ದಾರೆ.


ಆಂದೋಲನದ ಭಾಗವಾಗಿ ೫೦೦ಕ್ಕೂ ಹೆಚ್ಚು ಹೊಸ ಅಂಚೆ ಖಾತೆಗಳನ್ನು ತೆರೆಯುವ ಗುರಿಯನ್ನು ಹೊಂದಲಾಗಿದ್ದು, ಸ್ಥಳೀಯ ನಿವಾಸಿಗಳು ಅಂಚೆ ಕಚೇರಿಗೆ ಆಗಮಿಸಿ ಖಾತೆ ತೆರೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ನವೀನ್ ಕುಮಾರ್, ಮಾರಿಕುಪ್ಪಂನೊಂದಿಗೆ ಅಂಚೆ ಕಚೇರಿಗೆ ದಶಕಗಳ ನಂಟಿದೆ. ಚಿನ್ನದ ಗಣಿ ಕಾರ್ಯಾರಂಭಗೊಂಡ ಕಾಲದಿಂದಲೂ ಗಣಿ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಅನುಕೂಲವಾಗುವಂತೆ ಅಂಚೆ ಸೇವೆ ಒದಗಿಸುವ ಉದ್ದೇಶದಿಂದ ಇಲ್ಲಿ ಅಂಚೆ ಕಚೇರಿ ಆರಂಭಿಸಲಾಗಿತ್ತು. ಹಲವು ವರ್ಷಗಳಿಂದ ಈ ಭಾಗದ ಜನರ ಅಗತ್ಯಗಳಿಗೆ ಸ್ಪಂದಿಸುತ್ತಾ ಬಂದಿರುವ ಅಂಚೆ ಕಚೇರಿಯನ್ನು ಯಾವುದೇ ಕಾರಣಕ್ಕೂ ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.


ಮಾರಿಕುಪ್ಪಂ ಅಂಚೆ ಕಚೇರಿಯೊಂದಿಗೆ ಇಲ್ಲಿನ ನಿವಾಸಿಗಳಿಗೆ ಅವಿನಾಭಾವ ಸಂಬಂಧವಿದೆ. ಅಂಚೆ ಕಚೇರಿ ಬೇರೆಡೆಗೆ ಹೋದರೆ ವೃದ್ಧರು, ಕಾರ್ಮಿಕರು ಹಾಗೂ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ. ಆದ್ದರಿಂದ ಅಂಚೆ ಕಚೇರಿಯನ್ನು ಉಳಿಸಿಕೊಳ್ಳಲು ಜನರ ಸಹಕಾರದೊಂದಿಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.


ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ವ್ಯವಹಾರ ಕಡಿಮೆಯಾಗಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆದರೆ ಜನರು ಅಂಚೆ ಕಚೇರಿಯನ್ನು ಬಳಸಿದರೆ ವ್ಯವಹಾರ ಹೆಚ್ಚಾಗಲಿದೆ. ಈ ಉದ್ದೇಶದಿಂದಲೇ ಸ್ಥಳೀಯ ನಿವಾಸಿಗಳಿಗೆ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.


ಮಾರಿಕುಪ್ಪಂನ ಅಂಚೆ ಕಚೇರಿ ಕೇವಲ ಒಂದು ಸರ್ಕಾರಿ ಕಚೇರಿಯಲ್ಲ; ಹಲವು ವರ್ಷಗಳಿಂದ ಈ ಭಾಗದ ಜನರ ಜೀವನದೊಂದಿಗೆ ಬೆಸೆದುಕೊಂಡಿರುವ ಸಾರ್ವಜನಿಕ ಸೇವಾ ಕೇಂದ್ರವಾಗಿದೆ. ಇದನ್ನು ಉಳಿಸಿಕೊಳ್ಳುವುದು ಸ್ಥಳೀಯ ಜನರ ಜವಾಬ್ದಾರಿಯಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಂಚೆ ಸೇವೆಗಳನ್ನು ಬಳಸಿಕೊಂಡು ಕಚೇರಿಯ ಸಾರ್ವಜನಿಕ ವ್ಯವಹಾರ ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದರು.


ಈ ವೇಳೆ ವೆಸ್ಟರ್ನ್ ಚಾರಿಟಬಲ್ ಎಜುಕೇಶನ್ ಟ್ರಸ್ಟ್ನ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.