
ನವದೆಹಲಿ,ಜು.೨೮: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಮತ್ತೊಂದು ಹಿನ್ನೆಡೆಯಾಗಿದ್ದು, ತಮಿಳುನಾಡಿಗೆ ದಿನಕ್ಕೆ ೩೫೦೦ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿಯ ಮಹತ್ವದ ಶಿಫಾರಸು ಮಾಡಿದೆ.
ದೆಹಲಿಯಲ್ಲಿ ನಡೆದ ಸಿಡಬ್ಲ್ಯೂಆರ್ ಸಿ ಸಭೆಯಲ್ಲಿ ನೀರು ಹರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದ್ದು,ತಮಿಳುನಾಡಿಗೆ ನಿತ್ಯ ೩,೫೦೦ ಕ್ಯೂಸೆಕ್‌ನಂತೆ ೧೫ ದಿನಗಳ ಕಾಲ ನೀರು ಹರಿಸುವಂತೆ ಸಮಿತಿ ಶಿಫಾರಸು ಮಾಡಿದೆ.
ವರ್ಚುವಲ್ ಮೂಲಕ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಹತ್ವದ ಶಿಫಾರಸು ಮಾಡಿದ್ದು, ಪ್ರತಿ ದಿನ ೩,೫೦೦ ಕ್ಯೂಸೆಕ್‌ನಂತೆ ೧೫ ದಿನಗಳ ಕಾಲ ಒಟ್ಟು ೪ ಟಿಎಂಸಿಗಳಷ್ಟು ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಹೇಳಿದೆ.
ಸಭೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ತಜ್ಞರ ತಂಡವು ರಾಜ್ಯದಲ್ಲಿ ಎದುರಾಗಿರುವ ತೀವ್ರ ಮಳೆ ಕೊರತೆ ಹಾಗೂ ಜಲಾಶಯಗಳಲ್ಲಿನ ಕಡಿಮೆ ನೀರಿನ ಮಟ್ಟದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದರು.ಹಾರಂಗಿ ಹೊರತುಪಡಿಸಿ ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕುಡಿಯುವ ನೀರಿಗೆ ಮತ್ತು ಸ್ಥಳೀಯ ರೈತರ ಬೆಳೆಗೆ ನೀರಿಲ್ಲ ಎಂದು ಬಲವಾಗಿ ವಾದ ಮಂಡಿಸಲಾಗಿತ್ತು. ಆದಾಗ್ಯೂ, ಸಮಿತಿಯು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದು ಹಾಗೂ ಕರ್ನಾಟಕದ ವಾದವನ್ನು ಪರಿಗಣಿಸದ ಈ ಆದೇಶದಿಂದಾಗಿ ರಾಜ್ಯದ ರೈತರು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳ ಜನರಲ್ಲಿ ಆತಂಕ ಮೂಡಿದೆ.
ಸಿಡಬ್ಲ್ಯೂಆರ್‌ಸಿ ನೀಡಿರುವ ಈ ಆದೇಶದಿಂದಾಗಿ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಮತ್ತೆ ನೀರಿನ್ ಅಭಾವ ಎದುರಾಗುವ ಭೀತಿ ಶುರುವಾಗಿದೆ. ಹೀಗಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ತೀರ್ಮಾನದ ವಿರುದ್ಧ ಕರ್ನಾಟಕ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಮೇಲ್ಮನವಿ ಸಲ್ಲಿಸಲು ಚರ್ಚೆ : ರಾಮಲಿಂಗಾ ರೆಡ್ಡಿ
ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ಮಹತ್ವದ ಶಿಫಾರಸ್ಸಿಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ,ಪ್ರತಿ ದಿನ ೩,೫೦೦ ಕ್ಯೂಸೆಕ್‌ನಂತೆ ೧೫ ದಿನಗಳ ಕಾಲ ಒಟ್ಟು ೪ ಟಿಎಂಸಿಗಳಷ್ಟು ನೀರು ಹರಿಸಲು ಶಿಫಾರಸು ಹೊರಬಿದ್ದಿದೆ.ಆದರೆ ನಮಗೆ ನೀರಿನ ಕೊರತೆ ಇದೆ, ನಾನು ಸಿಎಂ ಜೊತೆಗೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದರು.
ನಮಗೆ ಮಳೆ ಇಲ್ಲ, ವರ್ಷ ಪೂರ್ತಿ ಕುಡಿಯುವ ನೀರು ಬೇಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.































