Home Lead News ಕೆಪಿಎಸ್‌ಸಿ ಅಕ್ರಮ ಸಿಐಡಿಗೆ

ಕೆಪಿಎಸ್‌ಸಿ ಅಕ್ರಮ ಸಿಐಡಿಗೆ

ಬೆಂಗಳೂರು, ಜು. ೨೮- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ದಲ್ಲಿ ನಡೆದಿರುವ ನೇಮಕಾತಿ ಅಕ್ರಮದ ತನಿಖೆ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತ ಜತೆಗೆ ಅಕ್ರಮದ ಸಮಗ್ರ ತನಿಖೆ ನಡೆಸುವ ಉದ್ದೇಶದಿಂದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಬಗ್ಗೆ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಮುಂದಿನ ತನಿಖೆಗೆ ಸಿಐಡಿಗೆ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.


ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸುವ ಮೂಲಕ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸುವ ಸರ್ಕಾರದ ಬದ್ಧತೆಯನ್ನು ತೋರಿದ್ದೇವೆ ಎಂದು ಅವರು ತಿಳಿಸಿದ್ದಾರೆ.


ಸಾರ್ವಜನಿಕ ನೇಮಕಾತಿ ಪ್ರಕ್ರಿಯೆಗಳ ಪಾವಿತ್ರ್ಯ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಪರೀಕ್ಷೆಗಳು ಅಥವಾ ನೇಮಕಾತಿ ಪ್ರಕ್ರಿಯೆಗಳಲ್ಲಿನ ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ಯಾವುದೇ ಒತ್ತಡವಿಲ್ಲದೆ ನಿಷ್ಪಕ್ಷಪಾತವಾದ ತನಿಖೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಸಿಐಡಿ ತನಿಖೆಯಲ್ಲಿ ಕೆಪಿಎಸ್ಸಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾವುದೇ ಹುದ್ದೆಯಲ್ಲಿ ಇರಲಿ, ಅವರ ವಿರುದ್ದ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.


ಸ್ಪರ್ಧಾತ್ಮಕ ಪರೀಕ್ಷೆಗಳ ಪಾವಿತ್ರ್ಯತೆಯನ್ನು ಕಾಪಾಡುವುದು ಮತ್ತು ಪ್ರತಿಭಾವಂತರಿಗೆ ನ್ಯಾಯ ದೊರಕುವಂತೆ ಮಾಡುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಕೆಪಿಎಸ್‌ಸಿ ವಿರುದ್ಧ ದೂರು: ಸಿಐಡಿಯಿಂದ ತನಿಖೆ


ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ದಲ್ಲಿ ಸರ್ಕಾರಿ ಹುದ್ದೆಗಾಗಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.


ಕಮೀಷನರ್ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್‌ಸಿ ಯಲ್ಲಿ ಹುದ್ದೆಗಾಗಿ ನಡೆದಿದೆ ಎನ್ನಲಾದ ಡೀಲಿಂಗ್ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮೂರು ಎಫ್‌ಐಆರ್ ಗಳು ದಾಖಲಾಗಿವೆ ಎಂದು ಹೇಳಿದರು.


ಕೆಪಿಎಸ್‌ಸಿ ಯಲ್ಲಿ ಹುದ್ದೆಗಾಗಿ ನಡೆದಿರುವ ಡೀಲಿಂಗ್ ಸಂಬಂಧ ದಾಖಲಾದ ಮೂರು ಎಫ್‌ಐಆರ್ ಗಳ ಪೈಕಿ ಎರಡನ್ನು ಸಿಐಡಿಗೆ ವರ್ಗಾವಣೆ ಮಾಡಿ ಉಳಿದ ಒಂದು ಎಫ್‌ಐಆರ್ ತನಿಖೆಗೆ ಕೋರ್ಟ್‌ನಲ್ಲಿ ಅನುಮತಿ ಕೇಳಲಾಗಿದೆ ಎಂದು ಹೇಳಿದರು.


ಕೆಪಿಎಸ್‌ಸಿ ಯಲ್ಲಿ ಹುದ್ದೆಗಾಗಿ ನಡೆದಿರುವ ಡೀಲಿಂಗ್ ಸಂಬಂಧ ದಾಖಲಾಗಿರುವ ಮೂರು ಎಫ್‌ಐಆರ್ ಗಳ ಪೈಕಿ ಎರಡು ಕೇಸ್‌ಗಳನ್ನ ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಮಾಡಿದ್ದಾರೆ ಎಂದು ಹೇಳಿದರು


ಕೆಪಿಎಸ್‌ಸಿಯಲ್ಲಿ ೪೦೦ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ೮೦ ಲಕ್ಷ ರೂ. ವೆರಗೆ ಲಂಚ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.ಪಶುವೈದ್ಯರ ನೇಮಕಾತಿಯಲ್ಲಿ ಶೇ ೬೦ರಷ್ಟು ಹುದ್ದೆಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ, ಪ್ರತಿ ಹುದ್ದೆಗೆ ೮೦ ಲಕ್ಷ ರೂ ಲಂಚ ನಿಗದಿಯಾಗಿತ್ತು ಎನ್ನುವ ಆರೋಪದ ಆಡಿಯೋ ವೈರಲ್ ಆಗಿದೆ.


ಆರೋಪವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹಾಗೂ ಕೆಪಿಎಸ್‌ಸಿ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪಶುವೈದ್ಯಾಧಿಕಾರಿಗಳು ಹೋರಾಟ ನಡೆಸುತ್ತಿದ್ದಾರೆ.