Home ಸುದ್ದಿ ಅಂತರಾಷ್ಟ್ರೀಯ ಇರಾನ್ ಮೇಲೆ ಅಮೆರಿಕ ಭಾರಿ ವೈಮಾನಿಕ ದಾಳಿಟ್ರಂಪ್ ಪ್ರತೀಕಾರದ ಎಚ್ಚರಿಕೆ

ಇರಾನ್ ಮೇಲೆ ಅಮೆರಿಕ ಭಾರಿ ವೈಮಾನಿಕ ದಾಳಿಟ್ರಂಪ್ ಪ್ರತೀಕಾರದ ಎಚ್ಚರಿಕೆ

  • ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳಲು ಅಮೆರಿಕ ಪಣ; ೧೦ನೇ ದಿನವೂ ಮುಂದುವರಿದ ದಾಳಿ
  • ನಮ್ಮ ದೇಶ ಈಗ ’ಪೂರ್ಣಪ್ರಮಾಣದ ಯುದ್ಧ’ದಲ್ಲಿದೆ ಎಂದ ಇರಾನ್ ಅಧ್ಯಕ್ಷ ಪೆಜೆಷ್ಕಿಯಾನ್
  • ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ಕದನ
    *ಇರಾನ್ ಕ್ಷಿಪಣಿ-ಡ್ರೋನ್‌ಗಳನ್ನು ಹೊಡೆದುರುಳಿಸಿದ ಜೋರ್ಡಾನ್, ಕುವೈತ್

ವಾಷಿಂಗ್ಟನ್ / ಟೆಹ್ರಾನ್.ಜು.೨೧-ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲಿನ ದಾಳಿ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಇರಾನ್‌ನ ಮಿಲಿಟರಿ ಹಾಗೂ ಸಂವಹನ ನೆಲೆಗಳ ಮೇಲೆ ಅಮೆರಿಕ ಪಡೆಗಳು ಸತತ ೧೦ನೇ ರಾತ್ರಿಯೂ ತೀವ್ರ ವೈಮಾನಿಕ ದಾಳಿ ನಡೆಸಿವೆ.

ಇತ್ತೀಚೆಗೆ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕದ ಸೈನಿಕರು ಮೃತಪಟ್ಟಿದ್ದು, ಅವರ ಗೌರವಾರ್ಥವಾಗಿ ಇರಾನ್ ಮೇಲೆ ’ಕಠಿಣ ಪ್ರಹಾರ’ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.

ಅಮೆರಿಕ ಸೈನಿಕರ ಬಲಿ
ಜೋರ್ಡಾನ್‌ನ ಮುಸಾಫಕ್ ಸಾಲ್ಟಿ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಮೃತಪಟ್ಟ ಅಮೆರಿಕದ ಮೂವರು ಸೈನಿಕರಲ್ಲಿ ಇಬ್ಬರ ಗುರುತನ್ನು ಪೆಂಟಗನ್ ಅಧಿಕೃತವಾಗಿ ದೃಢಪಡಿಸಿದೆ
ಪ್ರೈವೇಟ್ ಇಸಾಬೆಲ್ಲಾ ಗೊಂಜಾಲೆಸ್ (೧೯) ಟೆಕ್ಸಾಸ್,ಲೆಫ್ಟಿನೆಂಟ್ ಟೈಲರ್ ಜೇಮ್ಸ್ ಫೀಹನ್ (೨೫) ಹವಾಯಿ,ದಾಳಿಯ ನಂತರ ಮತ್ತೊಬ್ಬ ಸೈನಿಕ ನಾಪತ್ತೆಯಾಗಿದ್ದು, ಅವರ ಮೃತದೇಹದ ಅವಶೇಷಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

‘ಪೂರ್ಣಪ್ರಮಾಣದ ಯುದ್ಧ’ ಇರಾನ್ ಅಧ್ಯಕ್ಷ
ಅಮೆರಿಕದ ದಾಳಿಗೆ ಪ್ರತಿಯಾಗಿ ಜೋರ್ಡಾನ್, ಬಹ್ರೇನ್ ಮತ್ತು ಸಿರಿಯಾದಲ್ಲಿರುವ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಟೆಹ್ರಾನ್ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಷ್ಕಿಯಾನ್, “ಇರಾನ್ ಪ್ರಸ್ತುತ ಅಮೆರಿಕದೊಂದಿಗೆ ಪೂರ್ಣಪ್ರಮಾಣದ ಯುದ್ಧದಲ್ಲಿದೆ” ಎಂದು ಪ್ರಕಟಿಸಿದ್ದಾರೆ.
ಕದನ ವಿರಾಮ ಸಂಪೂರ್ಣವಾಗಿ ಮುರಿದುಬಿದ್ದಿದ್ದರೂ ಸಹ, ಮಧ್ಯಸ್ಥಿಕೆ ವಹಿಸಿರುವ ದೇಶಗಳ ಮೂಲಕ ಎರಡೂ ಕಡೆಯ ರಾಜತಾಂತ್ರಿಕ ಸಂದೇಶಗಳ ವಿನಿಮಯ ಇನ್ನೂ ಮುಂದುವರಿದಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ.
ಜೋರ್ಡಾನ್ ಸೇನೆಯು ತನ್ನ ವಾಯುಪ್ರದೇಶಕ್ಕೆ ನುಗ್ಗಿದ ಇರಾನ್‌ನ ಮೂರು ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು, ಕುವೈತ್ ಸೇನೆಯು ಹಲವು ಇರಾನ್ ಡ್ರೋನ್‌ಗಳನ್ನು ತಡೆದು ಧ್ವಂಸಗೊಳಿಸಿದೆ.
ಬಹ್ರೇನ್ ವಾಯು ಸಂಚಾರ: ಬಹ್ರೇನ್‌ನ ವಿಮಾನ ಯಾನ ನಿಯಂತ್ರಣ ವ್ಯವಸ್ಥೆಯನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸಿದರೂ, ವಿಮಾನ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಬಹ್ರೇನ್ ತಿಳಿಸಿದೆ.
ಇರಾನ್‌ನ ನಗರಗಳ ಮೇಲೆ ಬಾಂಬ್ ಮಳೆ: ಇರಾನ್‌ನ ತಬ್ರಿಜ್, ಚಾಬಹಾರ್, ಕೊನಾರಕ್, ಬಂದರ್ ಮಹ್‌ಶಹರ್ ಹಾಗೂ ಬಂದರ್ ಇಮಾಮ್ ಖೊಮೇನಿ ನಗರಗಳ ಮೇಲೆ ಅಮೆರಿಕ ಭಾರಿ ಬಾಂಬ್ ದಾಳಿ ನಡೆಸಿದೆ ಎಂದು ಇರಾನ್‌ನ ’ತಸ್ನಿಮ್’ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಹಾರ್ಮುಜ್ ಜಲಸಂಧಿಯ ಅಪಾಯಕಾರಿ ಮಾರ್ಗದಲ್ಲಿ ಸಾಗುತ್ತಿದ್ದ ಎರಡು ತೈಲ ನೌಕೆಗಳು ಸ್ಫೋಟಗೊಂಡು ನಿಂತುಹೋಗಿವೆ ಎಂದು ಇರಾನ್ ಸೇನೆ (Iಖಉಅ) ಹೇಳಿಕೊಂಡಿದೆ. ಆದರೆ, ಇರಾನ್‌ನ ಈ ಪ್ರತಿಪಾದನೆಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ತಳ್ಳಿಹಾಕಿದೆ.