
ಮುಂಬೈ,ಅ.8- ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆ, ಖಡಕ್ ಸಂಭಾಷಣೆ ಮತ್ತು ತೀವ್ರತೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ , ಭಾರತೀಯ ಸಿನಿಮಾರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಹಿರಿಯ ನಟ ನಾನಾ ಪಾಟೇಕರ್ ಇಂದು ತಮ್ಮ 75 ನೇ ವಯಸ್ಸಿನಲ್ಲಿ ನಾನಾ ಯುಗವನ್ನು ಕೊನೆಗೊಳಿಸಿದ್ದಾರೆ. ನಟ ನಾನಾ ಪಾಟೇಕರ್ ಗ್ಲಾಮರ್ ಪ್ರಪಂಚದ ನಡು ನಡುವೆಯೂ ಅತ್ಯಂತ ಸರಳ ಹಾಗೂ ತತ್ವಬದ್ಧ ಜೀವನ ನಡೆಸುತ್ತಿದ್ದ ನಾನಾ ಪಾಟೇಕರ್ ಅವರ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದ ಪಯಣ ಅತ್ಯಂತ ರೋಚಕವಾಗಿದೆ.
ಜನವರಿ 1, 1951 ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮುರುದ್ನಲ್ಲಿ ಜನಿಸಿದ ವಿಶ್ವನಾಥ್ ಪಾಟೇಕರ್ ಅಲಿಯಾಸ್ ನಾನಾ ಪಾಟೇಕರ್ ಅತ್ಯಂತ ಸಾಧಾರಣ ಕುಟುಂಬದಿಂದ ಬಂದವರು. ಇವರ ತಂದೆ ಗಜಾನನ್ ಪಾಟೇಕರ್ ಜವಳಿ ವ್ಯಾಪಾರದಲ್ಲಿದ್ದು ಉದ್ಯೋಗಕ್ಕಾಗಿ ಮುಂಬೈನಲ್ಲಿ ನೆಲೆಸಿದ್ದರು. ತಾಯಿ ನಿರ್ಮಲಾ ಪಾಟೇಕರ್ ಗೃಹಿಣಿಯಾಗಿದ್ದು, ನಾನಾ ಅವರಿಗೆ ಕಟ್ಟುನಿಟ್ಟಿನ ಹಾಗೂ ಪ್ರೀತಿಯ ತಾಯಿಯಾಗಿದ್ದರು. ನಿರ್ಮಲಾ ಅವರು ತಮ್ಮ 99ನೇ ವಯಸ್ಸಿನಲ್ಲಿ, ಅಂದರೆ ಜನವರಿ 29, 2019 ರಂದು ನಿಧನರಾದರು. ನಾನಾ ಅವರು ಮೂವರು ಸಹೋದರರಲ್ಲಿ ಕಿರಿಯವರಾಗಿದ್ದು, ಅಶೋಕ್ ಪಾಟೇಕರ್ ಮತ್ತು ದಿಲೀಪ್ ಪಾಟೇಕರ್ ಇವರ ಸಹೋದರರಾಗಿದ್ದಾರೆ. ಈ ಸಹೋದರರು ತಮ್ಮ ಬಾಲ್ಯದ ದಿನಗಳನ್ನು ಮುರುದ್ನಲ್ಲಿಯೇ ಒಟ್ಟಿಗೆ ಕಳೆದರು, ನಂತರ ಇಡೀ ಕುಟುಂಬವು ಮುಂಬೈಗೆ ಸ್ಥಳಾಂತರಗೊಂಡಿತು.
1978 ರಲ್ಲಿ ನಾನಾ ಪಾಟೇಕರ್ ಅವರು ರಂಗಭೂಮಿ ಹಾಗೂ ಮರಾಠಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ನೀಲಕಾಂತಿ ಪಾಟೇಕರ್ ಅವರನ್ನು ವಿವಾಹವಾದರು. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ನಂತರದ ದಿನಗಳಲ್ಲಿ ಇಬ್ಬರೂ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರೂ, ಜೀವನದ ಪ್ರತಿಯೊಂದು ಕಷ್ಟದ ಸಮಯದಲ್ಲೂ ಪರಸ್ಪರ ಬೆಂಬಲವಾಗಿ ನಿಂತಿದ್ದಾರೆ. ಈ ದಂಪತಿಗೆ ದೂರ್ವಾಸ ಮತ್ತು ಮಲ್ಹಾರ್ ಎಂಬ ಇಬ್ಬರು ಪುತ್ರರಿದ್ದರು. ದುರದೃಷ್ಟವಶಾತ್, ಜೇಷ್ಠ ಪುತ್ರ ದೂರ್ವಾಸ ತಮ್ಮ ಎರಡೂವರೆ ವರ್ಷದ ಹರಯದಲ್ಲಿ ತೀವ್ರ ಅನಾರೋಗ್ಯದಿಂದ ಕೊನೆಯುಸಿರೆಳೆದರು. ಈ ಘಟನೆ ನಾನಾ ಅವರ ಜೀವನದಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತ್ತು.
ಕಿರಿಯ ಮಗ ಮಲ್ಹಾರ್ ಪಾಟೇಕರ್ ಪ್ರಸ್ತುತ ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮಲ್ಹಾರ್ ಅವರು ತಮ್ಮ ತಂದೆಯ ಚಲನಚಿತ್ರ ನಿರ್ಮಾಣ ಸಂಸ್ಥೆಯ ಉಸ್ತುವಾರಿ ನೋಡಿಕೊಳ್ಳುವುದರ ಜೊತೆಗೆ, ನಾನಾ ಪಾಟೇಕರ್ ಅವರು ಸ್ಥಾಪಿಸಿದ ‘ನಾಮ್ ಫೌಂಡೇಶನ್’ ಸಾಮಾಜಿಕ ಸಂಸ್ಥೆಯ ಕಾರ್ಯಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳ ರೈತರಿಗೆ ನೆರವು ನೀಡುವುದು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವುದು ಹಾಗೂ ಗ್ರಾಮಗಳ ಪುನರುಜ್ಜೀವನಕ್ಕಾಗಿ ನಾನಾ ಪಾಟೇಕರ್ ಮತ್ತು ಅವರ ಕುಟುಂಬ ಸಲ್ಲಿಸುತ್ತಿರುವ ಸಮಾಜಸೇವೆ ಅಪಾರವಾದದ್ದು. ಬೆಳ್ಳಿಪರದೆಯ ಮೇಲೆ ಅಪಾರ ಯಶಸ್ಸು ಗಳಿಸಿದ್ದರೂ, ತಮ್ಮ ಖಾಸಗಿ ಜೀವನವನ್ನು ಪ್ರಚಾರದ ಬೆಳಕಿನಿಂದ ದೂರವಿಟ್ಟು ಸರಳ ಜೀವನ ನಡೆಸುವ ಮೂಲಕ ನಾನಾ ಪಾಟೇಕರ್ ರಿಯಲ್ ಹೀರೋ ಆಗಿ ಜನಮಾನಸದಲ್ಲಿ ಉಳಿದಿದ್ದಾರೆ.























