
ಸಂಜೆವಾಣಿ ವಾರ್ತೆ
ಹನೂರು.ಜೂ.30:- ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿ 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹನೂರು ಕೊಳ್ಳೇಗಾಲ ಮುಖ್ಯ ರಸ್ತೆಯ ಮದುವನಹಳ್ಳಿ ಸಮೀಪದಲ್ಲಿ ಸೋಮವಾರ ಸಾಯಂಕಾಲ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ ಕೆ ಎ-57 ಎಫ್-3964 ಸಂಖ್ಯೆಯ ಚಾಮರಾಜನಗರ ವಿಭಾಗದ ಕರ್ನಾಟಕ ಸಾರಿಗೆ ಬಸ್ ಮದುವನಹಳ್ಳಿ ಸಮೀಪದ ಸೀಗೆಕಾಯಿ ಫ್ಯಾಕ್ಟರಿಯ ಮುಂಭಾಗ ಸಂಜೆ 5-30 ಗಂಟೆಯ ವೇಳೆಯಲ್ಲಿ ಚಾಲಕನ ಅತೀ ವೇಗದ ಚಾಲನೆಯಿಂದ ಬಸ್ ಪಲ್ಟಿಯಾಗಿದೆ.
ಈ ಘಟನೆಯಲ್ಲಿ 50 ವರ್ಷದ ಮಹೇಶ್ ಕುದೇರು, 60 ವರ್ಷದ ಪುಟ್ಟನಂಜಮ್ಮ ಕೊಳ್ಳೇಗಾಲ ಪಟ್ಟಣದ ನಿವಾಸಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಹತ್ತಿರದ ಕೊಳ್ಳೇಗಾಲ ಆಸ್ಪತ್ರೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಹಲವರನ್ನು ಚಾಮರಾಜನಗರ ಸಿಮ್ಸ್ ಮತ್ತು ಮೈಸೂರಿನ ಕೆ ಆರ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಘಟನೆ ತಿಳಿಯುತ್ತಿದ್ದಂತೆ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಚಾಮರಾಜನಗರ ಜಿಲ್ಲಾ ಎಸ್ ಪಿ ಮುತ್ತುರಾಜು ಎಂ ರವರು ಹಾಗೂ ಎ ಎಸ್ ಪಿ ಎಂ ಎನ್ ಶಶಿಧರ್ ರವರು ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ವಿವರಣೆ ಪಡೆದುಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ
ಸಾರಿಗೆ ಇಲಾಖೆಯ ಚಾಮರಾಜನಗರ ಡಿ ಸಿ ನಾಗರಾಜ್ ರವರು ಕೂಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡು ಸಾವನ್ನಪ್ಪಿರುವ ಇಬ್ಬರು ಕುಟುಂಬದವರಿಗೆ 25 ಸಾವಿರ ರೂಗಳನ್ನು ಅಂತ್ಯ ಸಂಸ್ಕಾರ ಮಾಡಲು ನೀಡಿದ್ದು ಮೃತರ ಕುಟುಂಬಸ್ಥರಿಗೆ ಇಲಾಖೆಯಿಂದ ಪರಿಹಾರದ ಹಣ ನೀಡಲಾಗುವುದು ಗಾಯಗೊಂಡಿರುವ ಎಲ್ಲಾ ಗಾಯಳುಗಳಿಗೆ ಉತ್ತಮವಾದ ಚಿಕಿತ್ಸೆ ನೀಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.


































