
ಸಂಜೆವಾಣಿ ನ್ಯೂಸ್
ಮೈಸೂರು, ಜು.15:- ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಅವರು ಕರೆ ನೀಡಿದರು.
ತಾಲ್ಲೂಕಿನ ಇಲವಾಲ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಹಿರಿಯ ಪ್ರೌಢಶಾಲೆ ಸಹಯೋಗದಲ್ಲಿ ಮಂಗಳವಾರ ನಡೆದ ಎಸ್ಐಆರ್ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್ಐಆರ್ ಪ್ರಕ್ರಿಯೆಯು ಜೂನ್ 30ರಿಂದ ಆರಂಭವಾಗಿದ್ದು, ಜುಲೈ 29ರವರೆಗೆ ನಡೆಯಲಿದೆ. ನೋಂದಣಿಗಾಗಿ ಬಿಎಲ್ಒ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಅವರಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಸಹಾಯ ಮತ್ತು ಸೌಲಭ್ಯ ಕೇಂದ್ರ ತೆರೆಯಲಾಗಿದೆ. ಎಸ್ಐಆರ್ ಗೆ ಸಂಬಂಧಿಸಿದ ಮಾಹಿತಿ, ಅರ್ಜಿ ನಮೂನೆ ಇತರ ಸೌಲಭ್ಯಗಳಿಗೆ ಭೇಟಿ ನೀಡಿ, ನಮ್ಮ ಸಿಬ್ಬಂದಿ ಜೊತೆಗೆ ಚರ್ಚಿಸಿ ಗೊಂದಲ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಯಾವುದೇ ಅರ್ಹ ಮತದಾರರು ವಂಚಿತರಾಗಬಾರದು
ಇಲವಾಲ ಗ್ರಾಮ ಪಂಚಾಯಿತಿ ಪಿಡಿಒ ಡಿ.ಸಿ.ಶಿವಣ್ಣ ಅವರು ಮಾತನಾಡಿ, ಚುನಾವಣೆಗಳಲ್ಲಿ ಯಾವುದೇ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು.
ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ. ಈ ನಿಟ್ಟಿನಲ್ಲಿ ಎಸ್ಐಆರ್ ನೋಂದಣಿ ಮಹತ್ವದ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಲೋಕೇಶ್, ಗ್ರಾಮಾಡಳಿತಾಧಿಕಾರಿ ಭಾರತೀಶ್, ಪ್ರಾಂಶುಪಾಲರಾದ ಕುಮಾರ್, ಉಪ ಪ್ರಾಂಶುಪಾಲರಾದ ನಂದೀಶ್, ಉಪನ್ಯಾಸಕರಾದ ಮಹದೇವು, ಗ್ರಾ.ಪಂ. ಎಸ್ ಡಿಎಎ ವಿರೂಪಾಕ್ಷ, ಡಿಇಒ ರಮೇಶ್, ಸುಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.


































