
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜು.28:- ನಮ್ಮೂರ ಬಾರ್ ಬಂದ್ ಮಾಡಿಸಿ ತಾಳಿ ಉಳಿಸಿ, ನಮ್ಮ ಮಕ್ಕಳ ಪ್ರಾಣ ಉಳಿಸಿ, ನಮ್ಮ ಸಂಸಾರ ಹಾಳಾಗುತ್ತಿದೆ ಉಳಿಸಿ ಎಂದು ತಾಲೂಕಿನ ಬಡಕನಕೊಪ್ಪಲು ಗ್ರಾಮದ ನೂರಾರು ಮಹಿಳೆಯರು ಗ್ರಾಮದಲ್ಲಿ ತೆರದಿರುವ ಎಸ್.ಬಿ.ಬಾರ್ ಮತ್ತು ರೆಸ್ಟೋರೆಂಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ನಮ್ಮೂರಲ್ಲಿ ಈ ಬಾರ್ ಅಂಗಡಿ ತೆರದಾಗದಿಂದ ನಮ್ಮೂರಿನ ಘನತೆ, ಗೌರವ, ಹಾಳಾಗಿದೆ, ಮೂವತ್ತೈದು ವರ್ಷದಿಂದ ನಲವತ್ತು ವರ್ಷದವರೆಗಿನ ಗಂಡು ಮಕ್ಕಳಿಗೆ ಇನ್ನೂ ಮದುವೆ ಮಾಡಲು ಸಾದ್ಯವಾಗಿಲ್ಲ, ಊರಿನ ಮುಂದೆ ಬಾರ್ ಇದೆ ನಿಮ್ಮ ಮನೆಗೆ ಹೆಣ್ಣು ಕೊಟ್ಟರೆ ನಮ್ಮ ಹೆಣ್ಮಕ್ಕಳ ಜೀವನ ಹಾಳಾಗುತ್ತದೆ ಎಂದು ಯಾರು ಕೂಡ ನಮ್ಮ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಸಾರ್ ದಯವಿಟ್ಟು ನಮ್ಮೂರಿಗೆ ಈ ಬಾರ್ ಬೇಡ ಸಾರ್ ಎಂದು ನೂರಾರು ಮಹಿಳೆಯರು ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ ಹಾಗೂ ಪೆÇಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಮುಂದೆ ಕಣ್ಣೀರು ಹಾಕಿದರು.
ಈ ವೇಳೆ ಮಾತನಾಡಿದ ಮಹಿಳೆಯರು ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ಹಾಳಾಗುತ್ತಿದ್ದು, ಬಾರ್‍ನಿಂದಾಗಿ ಯುವಕರು ದುಶ್ಚಟಗಳಿಗೆ ದಾಸರಾಗಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರಾಣವನ್ನೆ ಕಳೆದು ಕೊಳ್ಳುವ ಸ್ಥಿತಿ ಬಂದಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಇದುವರೆಗೆ ಶಾಂತಿ ನೆಲೆಸಿದ್ದು, ಬಾರ್ ಆರಂಭವಾದರೆ ಕುಟುಂಬಗಳ ನೆಮ್ಮದಿ ನಾಶವಾಗಲಿದೆ. ಮದ್ಯ ಸೇವನೆಯಿಂದ ಕುಟುಂಬ ಕಲಹಗಳು ಹೆಚ್ಚಾಗುತ್ತಿದೆ. ಮನೆಯಲ್ಲಿ ಕುಟುಂಬದ ನಿರ್ವಹಣೆ ಕಷ್ಟಸಾದವಾಗಿದೆ, ಮದ್ಯ ಕುಡಿಯಲು ಮನೆಯಲ್ಲಿದ್ದ ಅಕ್ಕಿ ರಾಗಿ ಮಾರಿ ಕುಡಿತಕ್ಕೆ ದಾಸರಾಗಿ ರಸ್ತೆ ಬದಿಯಲ್ಲಿ ಮಲಗುತ್ತಿದ್ದಾರೆ ಏನಾದರೂ ಅನಾಹುತ ಆದರೆ ಯಾರು ಹೊಣೆ ಅದ್ದರಿಂದ ನಮ್ಮೂರಿಗೆ ಬಾರ್ ಬೇಡ ಮುಚ್ಚಿ ಸಿ ಯಾವುದೇ ಕಾರಣಕ್ಕೂ ಬಾರ್ ತೆರೆಯಲು ಬಿಡುವುದಿಲ್ಲ ಎಂದು ಮಹಿಳೆಯರು ಘೋಷಣೆ ಕೂಗಿದರು.
ಬಡಕನಕೊಪ್ಪಲು ಗ್ರಾಮದ ಬಾರ್ ಮತ್ತು ರೆಸ್ಟೋರೆಂಟ್ ತೆರವು ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು, ಪೆÇಲೀಸ್ ಇಲಾಖೆ, ಅಬಕಾರಿ ಇಲಾಖೆ ಸೇರಿದಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಕೊಡಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ ಮಹಿಳೆಯರಿಂದ ಮನವಿ ಪತ್ರ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದಾಗಿ ಭರವಸೆ ನೀಡಿದರು. ಪೆÇಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಅಬಕಾರಿ ಇಲಾಖೆ ಅಧಿಕಾರಿಗಳು ಇದ್ದರು.































