
ಸಂಜೆವಾಣಿ ವಾರ್ತೆ
ಹನೂರು ಜು 28 :- ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯದಲ್ಲಿ ಕಾಡುಹಂದಿ ಬೇಟೆಯಾಡಲು ಬಂದಿದ್ದ ನಾಲ್ವರು ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಲು ಯತ್ನಿಸಿ ಗುಂಡು ಹಾರಿಸಿ ಓರ್ವ ಬೇಟೆಗಾರನನ್ನು ಬಂಧಿಸಿ ಮೂವರು ಪರಾರಿಯಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಅನ್ವಿತ್ ಎಂಬುವನು ಬಂಧಿತ ಆರೋಪಿಯಾಗಿದ್ದಾನೆ. ದರ್ಶನ್, ಮಂಜ ಹಾಗೂ ಕಿರಣ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಸೋಮವಾರ ಬೆಳಗಿನ ಜಾವ 3 ರಿಂದ 4 ಗಂಟೆ ಸಮಯದಲ್ಲಿ ಕೆಎ-02 ಝಡ್ 7225 ನೋಂದಣಿಯ ಆಲ್ಟೊ ಕಾರಿನಲ್ಲಿ ಬಂದಿದ್ದ ಆರೋಪಿಗಳನ್ನು ಅರಣ್ಯ ಸಿಬ್ಬಂದಿಯವರು ತಡೆದು ತಪಾಸಣೆ ನಡೆಸಲು ಮುಂದಾಗಿದ್ದಾರೆ ಈ ವೇಳೆ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಕಾರ್ ಡ್ರೈವರ್ ಅನ್ವಿತ್ ಎಂಬಾತನ ಬಲಗಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಸ್ಥಳದಲ್ಲಿ ಎರಡು ಮೃತ ಕಾಡು ಹಂದಿಗಳು, ಒಂದು ಮಚ್ಚು, ಎರಡು ಟಾರ್ಚ್, ಒಂದು ಟಾರ್ಪಲ್, ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಲ್ಟೊ ಕಾರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡ ಅನ್ವಿತ್ಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿ.ಸಿ.ಎಫ್ ಭಾಸ್ಕರ್ ಮಾರ್ಗದರ್ಶನದಲ್ಲಿ ಮಲೆ ಮಹದೇಶ್ವರ ಬೆಟ್ಟದ ವಲಯ ಅರಣ್ಯಾಧಿಕಾರಿ ರವಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದಾರೆ. ಪರಾರಿಯಾದ ಆರೋಪಿಗಳನ್ನು ಪತ್ತೆಗೆ ಬಲೆ ಬೀಸಿದ್ದಾರೆ. ಮೃತ ಕಾಡು ಹಂದಿಗಳನ್ನು ಕೊಳ್ಳೇಗಾಲ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


































