
ಸಂಜೆವಾಣಿ ವಾರ್ತೆ
ಹನೂರು.ಜು.28:- ಚಲುವ ಚಾಮರಾಜ ನಗರ ಜಿಲ್ಲೆಯ ಗಡಿಭಾಗದ ಮಡಿಲಲ್ಲಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟವು ದಕ್ಷಿಣ ಕರ್ನಾಟಕದ ಅತಿದೊಡ್ಡ ಮತ್ತು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು . “ಮೈಕಾರ ಮಾದಪ್ಪನಿಗೊಂದು ಸಾರಿ ಉಘೇ…” ಎಂಬ ಭಕ್ತರ ಜಯಘೋಷಗಳು ಸದಾ ಮೊಳಗುವ ಈ ಪುಣ್ಯಕ್ಷೇತ್ರವು, ಕೇವಲ ಧಾರ್ಮಿಕ ಕೇಂದ್ರವಾಗಿರದೆ ಲಕ್ಷಾಂತರ ಭಕ್ತರ ನಂಬಿಕೆ ಮತ್ತು ಭಾವನೆಗಳ ಬೆಸುಗೆಯಾಗಿದೆ.
ಕರ್ನಾಟಕ ರಾಜ್ಯದಲ್ಲೇ ಇದು ಮೊದಲ ಸ್ಥಾನವನ್ನು ಪಡೆಯುತ್ತದೆ. ಇದರಿಂದ ಪ್ರಾಧಿಕಾರಕ್ಕೂ ಹೆಚ್ಚಿನ ಆದಾಯ ಹರಿದುಬರಲಿದೆ. ಆದರೆ, ಪ್ರಸ್ತುತ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಕನಸು ನನಸಾಗಲು ಪ್ರಾಧಿಕಾರ ಮತ್ತು ಭಕ್ತರು ಜಂಟಿಯಾಗಿ ಬಗೆ ಹರಿಸಬೇಕಾದ ಹಲವು ಸವಾಲುಗಳಿವೆ.
ಮಾದಪ್ಪನಿಗೆ ಪಂಜಿನ ಸೇವೆ ಮತ್ತು ಉರುಳು ಸೇವೆ ಮಾಡುವುದು ಬಹಳ ಶ್ರದ್ಧೆಯ ಸಂಪ್ರದಾಯ. ಆದರೆ, ಪಂಜಿನಿಂದ ಬೀಳುವ ಬೆಂಕಿಯ ಕಿಡಿಗಳು ಉರುಳು ಸೇವೆ ಮಾಡುವ ಭಕ್ತರ ಮೈ ಸುಡುತ್ತಿದ್ದು, ಗಾಯಗಳಾಗುತ್ತಿವೆ. ಭಕ್ತರ ಸುರಕ್ಷತೆಗಾಗಿ ಪಂಜಿನ ಸೇವೆಗೆಂದೇ ನಿರ್ದಿಷ್ಟ ಮತ್ತು ಸುರಕ್ಷಿತ ಸ್ಥಳವನ್ನು ಪ್ರಾಧಿಕಾರ ಮೀಸಲಿಡಬೇಕಿದೆ.
ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮತ್ತು ನಾಗ ಮಲೆಗೆ ತೆರಳುವ ಚಾರಣಿಗರಿಗೆ ಕಾಡುಪ್ರಾಣಿಗಳ ದಾಳಿಯ ಆತಂಕವಿದೆ. ಸೂಕ್ತ ಭದ್ರತೆ ಇಲ್ಲದ ಕಾರಣ, ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಯಾಗುವವರೆಗೆ ಅರಣ್ಯ ಇಲಾಖೆ ನಾಗಮಲೆ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಭಕ್ತರಿಗೆ ಅರಣ್ಯ ಮಾರ್ಗದಲ್ಲಿ ಸೂಕ್ತ ರಕ್ಷಣೆ ಮತ್ತು ಮಾರ್ಗದರ್ಶನದ ವ್ಯವಸ್ಥೆ ತುರ್ತಾಗಿ ಆಗಬೇಕಿದೆ.
ಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದರೂ, ಸಾಕಷ್ಟು ಶೌಚಾಲಯಗಳಿಲ್ಲ. ಇರುವ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ ಅಥವಾ ನಿರ್ವಹಣೆ ಇಲ್ಲದೆ ಅಶುಚಿತ್ವದಿಂದ ಕೂಡಿವೆ.
ಇದರಿಂದ ಮಹಿಳಾ ಭಕ್ತರು ಸೇರಿದಂತೆ ಎಲ್ಲರಿಗೂ ಮುಜುಗರ ಮತ್ತು ತೊಂದರೆಯಾಗುತ್ತಿದ್ದು, ಬಯಲು ಶೌಚಾಲಯದ ಮೊರೆ ಹೋಗುವಂತಾಗಿದೆ. ಇಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಿದೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ತುರ್ತು ಸೇವೆಗೆ ಆಂಬ್ಯುಲೆನ್ಸ್ ಇಲ್ಲದಿರುವುದು ಭಕ್ತರ ಹಾಗೂ ಸ್ಥಳೀಯರ ಜೀವಕ್ಕೆ ಅಪಾಯ ತಂದೊಡ್ಡುವ ಆತಂಕವಿದೆ.
ಕೇವಲ ಕಟ್ಟಡಗಳ ನಿರ್ಮಾಣವಷ್ಟೇ ಅಲ್ಲದೆ, ದೇವಸ್ಥಾನದ ಸಿಬ್ಬಂದಿ ಭಕ್ತರೊಂದಿಗೆ ಸೌಜನ್ಯದಿಂದ ವರ್ತಿಸುವುದು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಹಾಗೂ ದರ್ಶನಕ್ಕೆ ಸುಗಮವಾದ ಸರತಿ ಸಾಲಿನ ವ್ಯವಸ್ಥೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕಿದೆ.
ಮಲೆ ಮಹದೇಶ್ವರ ಸ್ವಾಮಿ ಮತ್ತು ಭಕ್ತರ ನಡುವಿನ ಸಂಬಂಧವು ಕೇವಲ ಭಕ್ತಿಗಷ್ಟೇ ಸೀಮಿತವಾಗಿಲ್ಲ; ಅದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧವಾಗಿದೆ.
ಭಕ್ತರು ಹುಂಡಿಗೆ ನೀಡುವ ಕಾಣಿಕೆಯು ಕ್ಷೇತ್ರದ ಅಭಿವೃದ್ಧಿಗೆ ಮತ್ತು ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛ ಶೌಚಾಲಯ, ಆರೋಗ್ಯ ಸೇವೆ ಮತ್ತು ಸುರಕ್ಷತೆಗೆ ವಿನಿಯೋಗವಾಗಬೇಕು ಹಾಗೂ ತಿರುಪತಿ ಮಾದರಿಯ ಆಡಳಿತ ಜಾರಿಗೆ ಬರಬೇಕು ಎಂಬುದು ಪ್ರಾಧಿಕಾರಕ್ಕಿರುವ ಜವಾಬ್ದಾರಿಯಾಗಿದೆ.
ಹಾಗೆಯೇ, ಭಕ್ತಿ ಪರವಶತೆಯಲ್ಲಿ ನಮ್ಮ ಹಾಗೂ ಇತರರ ಜೀವಕ್ಕೆ ಅಪಾಯ ತಂದುಕೊಳ್ಳಬಾರದು. ಇದು ಕಾಡಿನ ಮಧ್ಯೆ ಇರುವ ಪುಣ್ಯಕ್ಷೇತ್ರವಾಗಿರುವುದರಿಂದ ಪ್ಲಾಸ್ಟಿಕ್ ಬಳಸದೆ ಪರಿಸರವನ್ನು ರಕ್ಷಿಸುವುದು, ವನ್ಯಜೀವಿಗಳಿಗೆ ತೊಂದರೆ ಮಾಡದಿರುವುದು ಮತ್ತು ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಕ್ತನ ಆದ್ಯ ಕರ್ತವ್ಯವಾಗಿದೆ.
ಮುಖ್ಯಮಂತ್ರಿ ಸಚಿವರು ಸಂಸದರು ಶಾಸಕರು ಕ್ಷೇತ್ರದ ಮಲೆ ಮಾದೇಶ್ವರ ಬೆಟ್ಟದಲ್ಲಿ ಇನ್ನು ಹೆಚ್ಚೆಚ್ಚು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಭಕ್ತಾದಿಗಳ ಆಶಯವಾಗಿದೆ.































