Home ಜಿಲ್ಲೆ ಮೈಸೂರು ಪ್ರಜ್ಞಾವಂತ ಯುವಕರು ರಾಜಕೀಯ ಕ್ಷೇತ್ರ ಪ್ರವೇಶಿಸಿ: ಮಂಜು

ಪ್ರಜ್ಞಾವಂತ ಯುವಕರು ರಾಜಕೀಯ ಕ್ಷೇತ್ರ ಪ್ರವೇಶಿಸಿ: ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.09:
ದೇಶದ ಭವಿಷ್ಯದ ಹಿತದೃಷ್ಠಿಯಿಂದ ಪ್ರಜ್ಞಾವಂತ ಯುವಕರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವಂತೆ ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್‍ನ ಎಸ್.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ತಾಲೂಕು ವಕೀಲರ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಸತ್ತು ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಇದೊಂದು ಸರ್ಕಾರಿ ಕಾರ್ಯಕ್ರಮ. 2026 ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರ ಪ್ರಜಾಪ್ರಭುತ್ವ ಚಲನಶೀಲತೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಮತ್ತು ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸುವ ದೃಷ್ಠಿಯಿಂದ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಯುವ ಸಂಸತ್ ಸಭೆಯನ್ನು ಆಯೋಜಿಸುವಂತೆ ಆದೇಶಿಸಿದೆ. ಅದರಂತೆ ತಾಲೂಕಿನ ಎಲ್ಲಾ ಪ್ರೌಢಶಾಲೆಗಳು, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು, ತಾಂತ್ರಿಕ ಹಾಗೂ ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಇಂದು ರಾಜ್ಯ ವಿಧಾನ ಸಭೆಯ ಮಾದರಿಯಲ್ಲಿಯೇ ಅಧಿಕಾರಿಗಳು ಆಸನ ವ್ಯವಸ್ಥೆ ಮಾಡಿ ಸ್ಪೀಕರ್, ಮುಖ್ಯಮಂತ್ರಿ, ವಿವಿಧ ಇಲಾಖಾ ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ಶಾಸಕರುಗಳನ್ನು ವಿದ್ಯರ್ಥಿಗಳಿಂದಲೇ ಆಯ್ಕೆ ಮಾಡಿ ಇಲ್ಲಿ ಸಂಸದೀಯ ಕಲಾಪಗಳಿಗೆ ವೇದಿಕೆ ನಿರ್ಮಿಸಿದ್ದಾರೆ. ಕ್ಷೇತ್ರದ ಶಾಸಕನಾಗಿ ನಾನು ಈಗಾಗಲೇ ನನ್ನ ತಾಲೂಕಿನ ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಸದನ ನಡೆಯುವ ಸಂದರ್ಭದಲ್ಲಿ ರಾಜ್ಯ ವಿಧಾನ ಸೌಧಕ್ಕೆ ಕರೆದುಕೊಂಡು ಹೋಗಿ ಕಲಾಪಗಳ ಖುದ್ದು ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದೆ. ಪ್ರಜ್ಞಾವಂತ ವಿದ್ಯಾರ್ಥಿಗಳು ರಾಜಕೀಯ ಕ್ಷೇತ್ರದ ಕಡೆಗೆ ಒಲವು ಮೂಡಿಸಿಕೊಂಡು ದೇಶ ಕಟ್ಟುವ ಸಮರ್ಥ ನಾಯಕರಾಗಿ ಹೊರಹೊಮ್ಮಬೇಕೆನ್ನುವುದು ನನ್ನ ಆಸೆ ಎಂದ ಶಾಸಕ ಹೆಚ್.ಟಿ.ಮಂಜು ದೇಶದ ಶಾಸಕಾಂಗ ಮತ್ತು ಕಾರ್ಯಾಂಗ ಪರಿಶುದ್ದವಾಗಿರಬೇಕು. ಪ್ರಾಮಾಣಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದ್ದಾಗ ಮಾತ್ರ ಬಲಿಷ್ಠ ಭಾರತ ನಿರ್ಮಾಣಗೊಳ್ಳಲು ಸಾಧ್ಯ ಎಂದರು.


ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ಕ್ಷೇತ್ರ ಶಿಕ್ಷಣಧಿಕಾರಿ ವೈ.ಕೆ.ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಂ.ಅಶೋಕಕುಮಾರ್, ವಿವಿಧ ಕಾಲೇಜುಗಳ ಪ್ರಾಧ್ಯಾಪಕರುಗಳಾದ ಶಿವಸ್ವಾಮಿ, ಅನುರಾಧ, ರಾಜೇಶ್ವರಿ ಸೇರಿದಂತೆ ಹಲವರಿದ್ದರು.