
ಮಂಗಳೂರು ಸಚಿವಸಂಪುಟ ಸಭೆಯಲ್ಲಿ ಘೋಷಣೆಗೆ- ಸಿಎಂಗೆ ಮನವಿ
ಪುತ್ತೂರು: ಮಂಗಳೂರಿನಲ್ಲಿ ಮುಂದೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಎರಡನೇ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಈ ಮನವಿಯನ್ನು ಸಲ್ಲಿಸಿದ್ದಾರೆ.
ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಹಿಂದಿನ ಅಧಿವೇಶನದಲ್ಲೂ ಸಹ ಚರ್ಚಿಸಲಾಗಿದೆ. ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸುವುದಾಗಿ ಈ ಹಿಂದಿನ ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಬಹಿರಂಗ ಸಮಾವೇಶದಲ್ಲಿ ಆಶ್ವಾಸನೆಯನ್ನು ಕೂಡಾ ನೀಡಿದ್ದರು ಎಂದವರು ತಿಳಿಸಿದ್ದಾರೆ.
ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಶಿಸಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಆಂಧ್ರಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಈ ಹಿಂದೆ ಆಂಧ್ರಪ್ರದೇಶದಲ್ಲಿರುವ ಇತರ ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅಂಗೀಕಾರ ಮಾಡಿರುವ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳಲಾಗಿತ್ತು. ಈ ಬಗ್ಗೆ ಸರಕಾರಕ್ಕೆ ಅಧ್ಯಯನ ವರದಿಯನ್ನು ಸಲ್ಲಿಸಲಾಗಿದೆ. ಆಂದ್ರ ಪ್ರದೇಶದಲ್ಲಿ ಸ್ಥಳೀಯ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ರೂಪಿಸುವಲ್ಲಿ ಅಳವಡಿಸಿರುವ ಮಾನದಂಡಗಳೇನು ಎಂಬುದರ ಬಗ್ಗೆ ಸದನದಲ್ಲಿ ನಾನು ಸರ್ಕಾರ ಗಮನಕ್ಕೆ ತಂದಿದ್ದೆ. ಈ ಬಗ್ಗೆ ಕ್ರಮ ವಹಿಸುವುದಾಗಿ ಸದನದಲ್ಲಿ ಭರವಸೆಯೂ ಸಿಕ್ಕಿತ್ತು. ಹಲವು ಭಾರಿ ಸದನದಲ್ಲಿ ತುಳುಭಾಷೆಯ ಅಧಿಕೃತ ಭಾಷೆಯನ್ನಾಗಿ ಸೇರ್ಪಡೆ ಮಾಡುವ ಬಗ್ಗೆ ಸುದೀರ್ಘ ಚರ್ಚೆಯೂ ನಡೆದಿತ್ತು.
ತುಳು ಭಾಷೆಗೆ ಲಿಪಿಯಿದ್ದು, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಪ್ರಾಚೀನ ಭಾಷೆಯಾಗಿರುತ್ತದೆ ಮತ್ತು ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಈಗಾಗಲೇ ಆಂಧ್ರಪ್ರದೇಶ, ಬಿಹಾರ, ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಿರುವಂತೆ, ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟದಲ್ಲೇ ಘೋಷಣೆ ಮಾಡುವಂತೆ ಶಾಸಕರು ಮುಖ್ಯಮಂತ್ರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
–ಬಾಕ್ಸ್–
ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಪಂಚ ದ್ರಾವಿಡ ಭಾಷೆಗಳ ಪೈಕಿ ತುಳು ಕೂಡಾ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬುದು ಈ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆಯೂ ಆಗಿದೆ. ಅಧಿಕೃತ ಸ್ಥಾನ ಮಾನದ ಬಗ್ಗೆ ಮುತುವರ್ಜಿವಹಿಸಿ ಕ್ರಮಕೈಗೊಳ್ಳುವ ಭರವಸೆಯನ್ನು ಹಿಂದಿನ ಮುಖ್ಯಮಂತ್ರಿಗಳು ನೀಡಿದ್ದರು. ಭರವಸೆ ಇನ್ನೂ ಘೋಷಣೆಯಾಗಿಲ್ಲ. ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಇದು ಘೋಷಣೆಯಾಗುತ್ತದೆ ಎಂಬ ಪೂರ್ಣ ವಿಶ್ವಾಸ ನನಗಿದೆ- ಅಶೋಕ್ ರೈ ಶಾಸಕರು ಪುತ್ತೂರು































