Home ಜಿಲ್ಲೆ ಜೋಳ ಖರೀದಿಯ  ಬಾಕಿ ಹಣ ಪಾವತಿಸದ ಕೇಂದ್ರ ಸರ್ಕಾರ

ಜೋಳ ಖರೀದಿಯ  ಬಾಕಿ ಹಣ ಪಾವತಿಸದ ಕೇಂದ್ರ ಸರ್ಕಾರ

ಸಂಜೆವಾಣಿ ವಾರ್ತೆ

ಬಳ್ಳಾರಿ, ಅ.04, ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲಾದ ಜೋಳದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನಿನ್ನೆ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಪ್ರತಿಭಟನೆ ಮಾಡಿ  ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯದ ಮಾನ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಿಗೆ ಮಾನ್ಯ ಅಪರ ಜಿಲ್ಲಾಧಿಕಾರಿಗಳ ಮೂಲಕ  ಮನವಿ ಸಲ್ಲಿಸಲಾಯಿತು

ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್, ಜೋಳವನ್ನು ಸರ್ಕಾರಕ್ಕೆ ಮಾರಾಟ ಮಾಡಿ ಮೂರು ತಿಂಗಳಾದರೂ ರೈತರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಸಾಲ ಮರುಪಾವತಿ, ಮುಂದಿನ ಬೆಳೆಗಾಗಿ ಅಗತ್ಯ ಸಿದ್ಧತೆಗಳು ಹಾಗೂ ಕುಟುಂಬ ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಇಂದು ಖರೀಧಿಯ ಹಣ ರೈತರಿಗೆ ಪಾವತಿಸದೇ, ಪಡಿತರ ವಿತರಣೆಯಲ್ಲಿ ಜೋಳ ನೀಡುತ್ತಿದ್ದಾರೆ, ಇದು ಸರಿಯಲ್ಲ,

ಆದ್ದರಿಂದ ಜೋಳ ಖರೀದಿಯ ಎಲ್ಲಾ ಬಾಕಿ ಹಣವನ್ನು ಯಾವುದೇ ವಿಳಂಬವಿಲ್ಲದೆ ರೈತರ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಬೇಕು ಎಂದರು.

ರಾಜ್ಯ ಸಮಿತಿ ಸದಸ್ಯ ಈ ಹನುಮಂತಪ್ಪ, ಇಂದು ಬಳ್ಳಾರಿ ಸೇರಿದಂತೆ ರಾಜ್ಯದಾದ್ಯಂತ ತೀವ್ರ ಬರ ಎದುರಾಗಿದ್ದು, ಸಾಮಾನ್ಯ ರೈತರು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ರಾಜಕೀಯ ಬಲಯಾಟ ಆಡುತ್ತಿದ್ದಾರೆ,  ಇದನ್ನು ಬಿಟ್ಟು ಜನರ ಸಂಕಷ್ಟಗಳ ಪರಿಹಾರಕ್ಕೆ ಗಮನ ಕೊಡಬೇಕು.  ಮುಂದಿನ ದಿನಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಕೃಷಿ ಉತ್ಪನ್ನಗಳ ಹಣವನ್ನು ನಿಗದಿತ ಅವಧಿಯೊಳಗೆ ಪಾವತಿಯಾಗುವಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು, ಹಮಾಲಿ ಕೂಲಿ ಸಹ ಸರ್ಕಾರ ಬಾಕಿ ಉಳಿಸಿಕೊಂಡಿದೆ, ಅದನ್ನು ಸಹ ಕೂಡಲೇ ಸಂದಾಯ ಮಾಡಬೇಕು, ಇಲ್ಲದಿದ್ದಲ್ಲಿ ಮುಂದಿನ ಹಂತದ ಹೋರಾಟ

ಬೆಳೆಸಬೇಕಾಗುತ್ತದೆ  ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ,  ಕುರುಗೋಡು ತಾಲೂಕ್ ಅಧ್ಯಕ್ಷ ಕೋಳೂರು ಪಂಪಾಪತಿ, ಉಪಾಧ್ಯಕ್ಷ ಕಲ್ಲುಕಂಬ ಪಂಪಾಪತಿ ಮಾತನಾಡಿದರು.  ರೈತರಾದ ಸತ್ಯನಾರಾಯಣ ರೆಡ್ಡಿ, ಶರ್ಮಾಶ್, ಓಬಳೇಶ್, ರವಿಕುಮಾರ್,  ಪಂಪನಗೌಡ,   ಸೀತಾರಾಮ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ,  ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು