
ಕಲಬುರಗಿ,ಅ.4-ಗಾಂಧಿ ಜಯಂತಿ ಪ್ರಯುಕ್ತ ಅ.2 ರಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಈ ಆದೇಶವನ್ನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಜೇವರ್ಗಿ ಕ್ರಾಸ್ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಎಎಸ್‍ಐ ತಿಪ್ಪಣ್ಣ, ಸಿಬ್ಬಂದಿಗಳಾದ ಪ್ರಭಾಕರ್, ಯಲ್ಲಪ್ಪ, ಸಂಗಣ್ಣ ಅವರು ದಾಳಿ ನಡೆಸಿ ಸಿಐಬಿ ಕಾಲೋನಿಯ ಯಶ್ವಂತ ಸರಡಗಿ ಎಂಬಾತನನ್ನು ಬಂಧಿಸಿ 3410 ರೂ.ಮೌಲ್ಯದ ಮದ್ಯ ಮತ್ತು 1 ಸಾವಿರ ರೂ.ನಗದು ಜಪ್ತಿ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನಗರದ ಭವಾನಿ ಶಂಕರ ಗುಡಿ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆರ್.ಜಿ.ನಗರ ಪೊಲೀಸ್ ಠಾಣೆ ಎಎಸ್‍ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ ಸಿದ್ರಾಮಯ್ಯ, ಮಲ್ಲನಗೌಡ ಮತ್ತು ಮಹಿಬೂಬ್ ಅವರು ದಾಳಿ ನಡೆಸಿ ಬ್ರಹ್ಮಪುರ ನಾಗರಕಟ್ಟಾದ ಶರಣಪ್ಪ ಅಲಿಯಾಸ್ ಶರಣು ಎಂಬಾತನನ್ನು ಬಂಧಿಸಿ 2145 ರೂ.ಮೌಲ್ಯದ ಮದ್ಯ ಮತ್ತು 250 ರೂ.ನಗದು ಜಪ್ತಿ ಮಾಡಿದ್ದಾರೆ.
ಸ್ಟೇಷನ್ ಬಜಾರ್ ಮತ್ತು ಆರ್.ಜಿ.ನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.























