
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.04: ಜೆಸ್ಕಾಂ ಬಳ್ಳಾರಿ ವಲಯದ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಪರವಾಗಿ, ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಗುತ್ತಿಗೆ ಆಧಾರಿತ ನೌಕರರನ್ನು ತೆಗೆಯದೆ ಮುಂದುವರಿಸಬೇಕು ಎಂದು ಒತ್ತಾಯಿಸಿದೆ.
ಬಳ್ಳಾರಿ ವಲಯದ ವಿವಿಧ ಕಚೇರಿಗಳು ಹಾಗೂ ಕ್ಷೇತ್ರಗಳಲ್ಲಿ ಪ್ರಸ್ತುತ ಸುಮಾರು 339 ಹೊರಗುತ್ತಿಗೆ ನೌಕರರು ಹತ್ತು ಹಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಕಂಪ್ಯೂಟರ್ ಆಪರೇಟರ್ಗಳು ಪರ್ಸನಲ್ ಅಸಿಸ್ಟೆಂಟ್ ಗಳು, ಆಫೀಸ್ ಬಾಯ್ಸ್, ಅಟೆಂಡರ್ಗಳು. ಸ್ಟೋರ್ ಹೆಲ್ಪರ್ಗಳು, ಲಾರಿ ಚಾಲಕರು, ಸ್ವೀಪರ್ಗಳು ಹಾಗೂ ವಾಚನ್ಗಳು ಸೇರಿದಂತೆ ವಿವಿಧ ವರ್ಗದ ನೌಕರರು ಇದ್ದಾರೆ.
ಚೆಸ್ಕಾಂ ಬಳ್ಳಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 339 ಗುತ್ತಿಗೆ ನೌಕರರ ಪೈಕಿ ಶೇ.40ರಷ್ಟು ನೌಕರರನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈಬಿಟ್ಟು, ಎಲ್ಲಾ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು.
ಹತ್ತು ಹಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರ ಉದ್ಯೋಗ ಭದ್ರತೆಯನ್ನು ಖಾತರಿಪಡಿಸಬೇಕು.
ಈ ನೌಕರರು ಇಲಾಖೆಯ ದಿನನಿತ್ಯದ ಆಡಳಿತಾತ್ಮಕ ಕಾರ್ಯಗಳು, ಗ್ರಾಹಕರ ಸೇವೆ, ಬಿಲ್ಲಿಂಗ್, ದಾಖಲೆಗಳ ನಿರ್ವಹಣೆ, ಕಚೇರಿ ಸಹಾಯಕ ಕಾರ್ಯಗಳು, ಸ್ವಚ್ಛತೆ, ಭದ್ರತೆ ಹಾಗೂ ಇತರ ಅಗತ್ಯ ಸೇವೆಗಳನ್ನು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಇವರ ಸೇವೆಯನ್ನು ಕಡೆಗಣಿಸಿ, ಗುತ್ತಿಗೆ ನೌಕರರ ಸಂಖ್ಯೆಯನ್ನು ಶೇ.40ರಷ್ಟು ಕಡಿತಗೊಳಿಸಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುವುದು ಅತ್ಯಂತ ಕಾರ್ಮಿಕ ವಿರೋಧಿ ಕ್ರಮವಾಗಿದೆ.
ಈ ನಿರ್ಧಾರ ಜಾರಿಯಾದಲ್ಲಿ ಬಳ್ಳಾರಿ ವಲಯದಲ್ಲಿಯೇ135ಕ್ಕೂ ಹೆಚ್ಚು ನೌಕರರು ಏಕಾಏಕಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕೇವಲ ವೆಚ್ಚ ಕಡಿತ ಹೆಸರಿನಲ್ಲಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಕೆಲಸದಿಂದ ಕಡಿತಗೊಳಿಸುವುದು ಕಾರ್ಮಿಕ ವಿರೋಧಿ ಕ್ರಮವಷ್ಟೇ ಅಲ್ಲ ಅತ್ಯಂತ ಅಮಾನವೀಯ ಕೂಡ. ವಿದ್ಯುತ್ ಸೋರಿಕೆ ತಡೆಗಟ್ಟುವುದು ಸೇರಿದಂತೆ, ಇಂತಹ ಹಲವಾರು ಪರ್ಯಾಯ ಕ್ರಮಗಳನ್ನು ತೆಗೆದುಕೊಂಡು, ವೆಚ್ಚ ಕಡಿತ ಮಾಡುವ ಬದಲು, ನೌಕರರ ಹೊಟ್ಟೆಯ ಮೇಲೆ ಹೊಡೆಯುವುದು ಅತ್ಯಂತ ನೋವಿನ ವಿಚಾರವಾಗಿದೆ ಹಾಗಾಗಿ ಯಾವುದೇ ಕಾರಣಕ್ಕೆ ಜೆಸ್ಕಾಂ ತನ್ನ ನಿರ್ಧಾರ ಬದಲಿಸಬೇಕೆಂದು ಆಗ್ರಹಿಸಿದ್ದಾರೆ.























