Home ಜಿಲ್ಲೆ ಕಲಬುರಗಿ ಯುವಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ: ಪ್ರೊ. ಬಟ್ಟು ಸತ್ಯನಾರಾಯಣ

ಯುವಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ: ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ,ಅ.4: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಹಾಗೂ ಕಲಬುರಗಿಯ ಇಎಸ್‍ಐ ಆಸ್ಪತ್ರೆ, ಸಹಯೋಗದಲ್ಲಿ ರಾಷ್ಟ್ರೀಯ ರಕ್ತದಾನ ದಿನದ ಅಂಗವಾಗಿ ವಿಶೇಷ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ವಿವಿಧೋದ್ದೇಶ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಯುವಜನರು ರಕ್ತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಗತ್ಯವಿರುವವರಿಗೆ ನೆರವಾಗಬೇಕು ಎಂದು ಕರೆ ನೀಡಿದರು. ರಕ್ತದಾನವು ಮಾನವೀಯ ಸೇವೆಯ ಜೊತೆಗೆ ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಯುವಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಎಸ್‍ಐ ಆಸ್ಪತ್ರೆಯ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅಬ್ದುಲ್ ಹಕೀಂ ಅತ್ತಾರ ಅವರು ಮಾತನಾಡಿ, ಒಂದು ಯೂನಿಟ್ ರಕ್ತವನ್ನು ದಾನ ಮಾಡುವುದರಿಂದ ಅದರ ವಿವಿಧ ಘಟಕಗಳ ಮೂಲಕ ಮೂವರು ರೋಗಿಗಳಿಗೆ ನೆರವಾಗಬಹುದು ಎಂದು ತಿಳಿಸಿದರು. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಮಾತನಾಡಿ, ದೇಶದಲ್ಲಿ ಪ್ರತಿವರ್ಷ ಸುಮಾರು 15 ಮಿಲಿಯನ್ ಯೂನಿಟ್ ರಕ್ತದ ಅಗತ್ಯವಿದ್ದು, ಪ್ರಸ್ತುತ ಸುಮಾರು 12 ಮಿಲಿಯನ್ ಯೂನಿಟ್‍ಗಳಷ್ಟೇ ಸಂಗ್ರಹವಾಗುತ್ತಿದೆ. ಅಗತ್ಯ ಮತ್ತು ಲಭ್ಯತೆಯ ನಡುವೆ ಇರುವ ಈ ಅಂತರವನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಗ್ರಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ರಕ್ತದಾನ ಮಾಡುವ ಮೂಲಕ ಅಗತ್ಯವಿರುವ ರೋಗಿಗಳಿಗೆ ನೆರವಾಗುವುದರ ಜೊತೆಗೆ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಯುಕೆಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ರಘು ಅಕಮಂಚಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕುಲಪತಿ ಸೇರಿದಂತೆ ವಿದ್ಯಾರ್ಥಿಗಳು ರಕ್ತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಕಾರ್ಯಕ್ರಮದ ಸಂಯೋಜಕ ಡಾ. ಡಿ. ರಂಗನಾಥ ಸ್ವಾಗತಿಸಿದರು. ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದ ವೈದ್ಯ ಡಾ. ರೋಹಿತ್ ಕುಮಾರ್ ವಂದನಾರ್ಪಣೆ ಮಾಡಿದರು.
ಪೆÇ್ರ. ಆರ್. ಎಸ್. ಹೆಗಡಿ, ಡಾ.ಬುಚಿರೆಡ್ಡಿ, ಸಹಾಯಕ ಕುಲಸಚಿವ ಸುನೀಲ್ ಜಿ., ಡಾ. ಚರಣ್ ಕುಮಾರ್, ಶ್ರೀ ಶಿವಕುಮಾರ್ ಸಿರಿಗೇರಿ, ಇಎಸ್‍ಐ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.