Home ಜಿಲ್ಲೆ ಶಿವಮೊಗ್ಗ ತುಂಗಾ ಜಲಾಶಯದಿಂದ ನೀರು ಹೊರಕ್ಕೆ

ತುಂಗಾ ಜಲಾಶಯದಿಂದ ನೀರು ಹೊರಕ್ಕೆ

ಶಿವಮೊಗ್ಗ, ಜು. ೫: ಮಲೆನಾಡಿನಲ್ಲಿ ಕ್ರಮೇಣ ಮುಂಗಾರು ಮಳೆ ಚುರುಕುಗೊಳ್ಳಲಾರಂಭಿಸಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯ ಗರಿಷ್ಠ ಮಟ್ಟವಾದ ೫೮೮.೨೪ ಮೀಟರ್ ತಲುಪಿದೆ.


ಈ ಹಿನ್ನೆಲೆಯಲ್ಲಿ ಡ್ಯಾಂನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಡ್ಯಾಂನ ಒಳಹರಿವು ೧೭,೭೮೫ ಕ್ಯೂಸೆಕ್ ಇದೆ.


೮ ಕ್ರಸ್ಟ್ ಗೇಟ್ ಗಳ ಮೂಲಕ ೧೩,೫೦೦ ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಹೊರ ಬಿಡಲಾಗುತ್ತಿದೆ.


ತುಂಗಾ ಜಲಾಶಯದಿಂದ ನೀರನ್ನು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.


ಪ್ರಸ್ತುತ ವರ್ಷ ಮುಂಗಾರು ಮಳೆ ಕೊರತೆಯಿಂದ ಜಲಾಶಯ ವಿಳಂಬವಾಗಿ ಭರ್ತಿಯಾಗಿದೆ.


ಮಳೆ ಚುರುಕು : ಮಲೆನಾಡು ಭಾಗದಲ್ಲಿ ಸಂಪೂರ್ಣ ಇಳಿಕೆಯಾಗಿದ್ದ ಮುಂಗಾರು ಮಳೆ, ಕ್ರಮೇಣ ಚುರುಕುಗೊಳ್ಳಲಾರಂಭಿಸಿದೆ. ಜುಲೈ ೦೪ ರಿಂದ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಲಾರಂಭಿಸಿದೆ.
ಮತ್ತೊಂದೆಡೆ, ಶಿವಮೊಗ್ಗ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.