
ಮಾಲೂರು, ಅ. ೧೪: ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಅನಧಿಕೃತ ಒತ್ತುವರಿಯನ್ನು ಏಳು ದಿನಗಳೊಳಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತ ಎಂ.ಎಸ್. ಮಹದೇವ್ ಸೂಚಿಸಿದ್ದಾರೆ.
ನಗರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳು, ಚರಂಡಿಗಳು, ಪಾದಚಾರಿ ಮಾರ್ಗಗಳು, ರಾಜಕಾಲುವೆಗಳು, ಕನ್ಸರ್ವೆನ್ಸಿಗಳು, ಉದ್ಯಾನವನಗಳು, ಬಯಲು ಪ್ರದೇಶಗಳು, ಸರ್ಕಾರಿ ಆಸ್ತಿಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡಗಳು, ಮುಂಭಾಗದ ಚಾಚುಗಳು, ಮೆಟ್ಟಿಲುಗಳು, ಶೆಡ್ಗಳು, ಪೆಟ್ಟಿಗೆ ಅಂಗಡಿಗಳು ಸೇರಿದಂತೆ ವಿವಿಧ ರೀತಿಯ ಅನಧಿಕೃತ ನಿರ್ಮಾಣಗಳು ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಪ್ರಕಟಣೆಯ ದಿನಾಂಕದಿಂದ ಏಳು ದಿನಗಳೊಳಗೆ ಇಂತಹ ಒತ್ತುವರಿ ಮತ್ತು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸದಿದ್ದಲ್ಲಿ, ಕರ್ನಾಟಕ ಪುರಸಭೆಗಳ ಅಧಿನಿಯಮದ ಅನ್ವಯ ನಗರಸಭೆಯೇ ತೆರವು ಕಾರ್ಯಾಚರಣೆ ನಡೆಸಿ, ಅದರ ವೆಚ್ಚವನ್ನು ಸಂಬಂಧಪಟ್ಟವರಿಂದ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ತೆರವು ಕಾರ್ಯಾಚರಣೆ ವೇಳೆ ಉಂಟಾಗುವ ಆಸ್ತಿ ಹಾನಿಗೆ ನಗರಸಭೆ ಜವಾಬ್ದಾರಿಯಾಗಿರುವುದಿಲ್ಲ ಎಂದೂ ತಿಳಿಸಿದ್ದಾರೆ.
ಇದೇ ವೇಳೆ, ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಅಂಗಡಿ-ಮುಂಗಟ್ಟುಗಳು ಮತ್ತು ವಾಣಿಜ್ಯ ಸಂಕೀರ್ಣಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಧಾನ ಸ್ಥಾನ ನೀಡಿ, ಕನಿಷ್ಠ ಶೇಕಡಾ ೬೦ ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿ ಇರಬೇಕೆಂದು ಸೂಚಿಸಲಾಗಿದೆ.
ಏಳು ದಿನಗಳೊಳಗೆ ನಾಮಫಲಕಗಳನ್ನು ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಪರಿಷ್ಕರಿಸಿಕೊಳ್ಳದಿದ್ದಲ್ಲಿ, ನಗರಸಭೆಯ ವತಿಯಿಂದ ಅವುಗಳನ್ನು ತೆರವುಗೊಳಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟವರಿಂದ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

























