
ಕೆ.ಆರ್.ಪುರ, ಅ.೧೪-ನವಜಾತ ಶಿಶುವಿಗೆ ೩೩ ದಿನಗಳ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಹೂಡಿಯ ಮೆಡಿಕವರ್ ಆಸ್ಪತ್ರೆಯಲ್ಲಿ ವೈದ್ಯರು ನವಜಾತ ಶಿಶುವಿಗೆ ಮರುಜೀವ ನೀಡಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿಯ ನವಜಾತ ಶಿಶುವೊಂದಕ್ಕೆ ಸಂಭವಿಸಿದ್ದ ಗಂಭೀರ ಆರೋಗ್ಯ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು, ಕೇವಲ ೮೫ ನಿಮಿಷಗಳಲ್ಲಿ ವಿಶೇಷ ಅಂಬ್ಯೂಲೆನ್ಸ್ ಮೂಲಕ ಮಗುವನ್ನು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಗೆ ರವಾನಿಸಿ, ಬರೋಬ್ಬರಿ ೩೩ ದಿನಗಳ ಸುದೀರ್ಘ ಚಿಕಿತ್ಸೆಯ ನಂತರ ಮಗುವನ್ನು ಸಂಪೂರ್ಣವಾಗಿ ಗುಣಮುಖಗೊಳಿಸಿ ಮನೆಗೆ ಕಳುಹಿಸಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಬಾಲೆ ರಜನಿ ಅವರ ನವಜಾತ ಹೆಣ್ಣು ಮಗು ಹುಟ್ಟಿದ ತಕ್ಷಣವೇ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಮಗುವಿನ ಶ್ವಾಸಕೋಶದಲ್ಲಿ ಮಲದ ಅಂಶ ಪ್ರವೇಶಿಸಿ ಹಾಗೂ ಶ್ವಾಸಕೋಶ ಗಾಳಿ ಸೋರಿಕೆಯಿಂದ ಬ್ಲಾಕ್ ಆಗಿದ್ದರಿಂದ ಮಗುವಿನ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು.
ಕೂಡಲೇ ಮಗುವನ್ನು ಅತ್ಯಾಧುನಿಕ ಲೈಫ್ ಸಪೋರ್ಟ್ ಸೌಲಭ್ಯವಿದ್ದ ’ವಿಶೇಷ ಅಂಬ್ಯೂಲೆನ್ಸ್’ ನಲ್ಲಿ ಮದನಪಲ್ಲಿಯಿಂದ ಕೇವಲ ೮೫ ನಿಮಿಷಗಳಲ್ಲಿ ಬೆಂಗಳೂರಿನ ವೈಟ್ಫೀಲ್ಡ್ನ ಮೆಡಿಕವರ್ ಆಸ್ಪತ್ರೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಮಾತನಾಡಿದ ಹಿರಿಯ ವೈದ್ಯರಾದ ಡಾ. ಶಿವಶಂಕರ್ ದಿಗ್ಗಿಕ್ಕರ್ ಅವರು ಮಗು ಆಸ್ಪತ್ರೆಗೆ ಬಂದಾಗ ಉಸಿರಾಟದ ವ್ಯವಸ್ಥೆ ಹಾಗೂ ರಕ್ತದೊತ್ತಡ ಸಂಪೂರ್ಣ ಕ್ಷೀಣಿಸಿತ್ತು. ತಕ್ಷಣವೇ ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ, ಕೃತಕ ಉಸಿರಾಟದ ಯಂತ್ರ ದ್ರವ ಚಿಕಿತ್ಸೆ ನೀಡಲಾಯಿತು. ಮಗುವಿಗೆ ಉಸಿರಾಟದ ಸಮಸ್ಯೆಯ ಜೊತೆಗೆ ಉಂಟಾಗಿದ್ದ ಶ್ವಾಸಕೋಶದ ಸಂಕೋಚನ ಮತ್ತಿತರ ಸವಾಲುಗಳನ್ನು ೩೩ ದಿನಗಳ ಚಿಕಿತ್ಸೆಯ ಮೂಲಕ ನಿವಾರಿಸಲಾಗಿದೆ. ಪ್ರಸ್ತುತ ಮಗು ಸಂಪೂರ್ಣ ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದಾಳೆ,” ಎಂದು ವಿವರಣೆ ನೀಡಿದರು.

























