
ಕಲಬುರಗಿ: ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಮರುಪರಿಶೀಲಿಸಿ, ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸುವಂತೆ ಹಾಗೂ ತೀವ್ರ ಬರದಿಂದ ಬಾಧಿತವಾಗಿರುವ ಇತರೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳಾಗಿ ಪರಿಗಣಿಸುವಂತೆ ಆಗ್ರಹಿಸಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ನಿಯೋಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಪ್ರಸ್ತುತ ಈ ಪ್ರದೇಶವು ಕಳೆದ ಹಲವು ದಶಕಗಳಲ್ಲಿ ಕಂಡುಬರದAತಹ ಭೀಕರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ೧೯೭೨ರ ಭೀಕರ ಬರಗಾಲದ ನಂತರ ಇಷ್ಟೊಂದು ತೀವ್ರವಾದ ಬರ ಪರಿಸ್ಥಿತಿ ನಮ್ಮ ಭಾಗದಲ್ಲಿ ನಿರ್ಮಾಣವಾಗಿದೆ ಎಂದು ರೈತರು ಹಾಗೂ ಗ್ರಾಮೀಣ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ವರ್ಷ ನಮ್ಮ ಭಾಗದಲ್ಲಿ ವಾಡಿಕೆಯ ಮಳೆಗೆ ಹೋಲಿಸಿದರೆ ಗರಿಷ್ಟಮಟ್ಟದಲ್ಲಿ ಸುಮಾರು ೭೦% ರಷ್ಟು ಮಳೆಯ ಕೊರತೆ ಉಂಟಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಕೊಳವೆ ಬಾವಿಗಳು, ಬಾವಿಗಳು ಹಾಗೂ ಇತರೆ ಜಲಮೂಲಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತೀವ್ರವಾದ ಅಭಾವ ಉಂಟಾಗಿದೆ.
ಇದರ ಪರಿಣಾಮವಾಗಿ ಕೃಷಿ ಕ್ಷೇತ್ರವೂ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದೆ. ಅನೇಕ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡಿರುವ ಪ್ರದೇಶಗಳಲ್ಲಿಯೂ ಮಳೆಯ ಕೊರತೆಯಿಂದ ಪ್ರಮುಖ ಬೆಳೆಗಳು ಒಣಗಿ ಹೋಗಿದ್ದು, ಬಹುತೇಕ ಬೆಳೆಗಳು ವಿಫಲವಾಗಿವೆ. ರೈತರು ಅಪಾರ ಪ್ರಮಾಣದ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೃಷಿ ಕಾರ್ಮಿಕರು, ಜಾನುವಾರು ಸಾಕಾಣಿಕೆದಾರರು ಹಾಗೂ ಗ್ರಾಮೀಣ ಜನರ ಜೀವನೋಪಾಯವೂ ತೀವ್ರವಾಗಿ ಬಾಧಿತವಾಗಿದೆ.
ಆದರೆ, ಪ್ರಸ್ತುತ ಸರ್ಕಾರದ ಬರ ಘೋಷಣೆ ಹಾಗೂ ಮೌಲ್ಯಮಾಪನವು ನೆಲಮಟ್ಟದಲ್ಲಿರುವ ನೈಜ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಿಲ್ಲ ಎಂಬುದು ನಮ್ಮ ಆತಂಕವಾಗಿದೆ. ಈ ಕೂಡಲೇ ಸರ್ಕಾರವು ಕೇವಲ ಕಚೇರಿ ದಾಖಲೆಗಳು ಮತ್ತು ಅಂಕಿ-ಅAಶಗಳ ಆಧಾರದ ಮೇಲೆ ಅಲ್ಲದೆ, ಗ್ರಾಮಗಳಿಗೆ ತೆರಳಿ, ರೈತರ ಜಮೀನುಗಳಿಗೆ ಭೇಟಿ ನೀಡಿ, ನೈಜ ಪರಿಸ್ಥಿತಿಯ ಆಧಾರದ ಮೇಲೆ ಬರ ಪರಿಸ್ಥಿತಿಯನ್ನು ಮರುಮೌಲ್ಯಮಾಪನ ಮಾಡಿ ಕಲಬುರಗಿ ಜಿಲ್ಲೆಯನ್ನು ಬರಪೀಡಿ ಜಿಲ್ಲೆ ಘೋಷಿಸಿ ಸೂಕ್ತ ಪರಿಹಾರದ ಲಾಭ ದೊರಕಿಸಿ ಕೊಡಲು ಮುಂದಾಗಬೇಕು ಎಂದು ನಿಯೋಗ ಒತ್ತಾಯಿಸಿದೆ.
ನಿಯೋಗದಲ್ಲಿ ಸಮಿತಿ ಅಧ್ಯಕ್ಷರಾದ ಗೌತಮ ವೈಜನಾಥ ಪಾಟೀಲ, ಮುಖಂಡರಾದ ಉಮಾಕಾಂತ ನಿಗ್ಗುಡಗಿ, ಚಂದ್ರಶೇಖರ ಹರಸೂರ, ಡಾ.ಅರುಣಕುಮಾರ ಎಸ್.ಪಾಟೀಲ ಕೊಡಲಹಂಗರಗಾ, ಜಗದೀಶ ಪಾಟೀಲ ರಾಜಾಪೂರ, ಶಿವರಾಜ ಮಾಲಿಪಾಟೀಲ, ಮಲ್ಲಿನಾಥ ಪಾಟೀಲ ಕಾಳಗಿ, ಪಿತಂಬರರಾವ ಘಂಟೆ, ಭವಾನಿರಾವ ಪತ್ತೇಪೂರ ಸೇರಿದಂತೆ ಹಲವರಿದ್ದರು.





























