
ಹುಳಿಯಾರು, ಜೂ. ೨- ನಿತ್ಯ ನೂರಾರು ಪ್ರಯಾಣಿಕರು, ಪ್ರವಾಸಿಗರು ಬಂದು ಹೋಗುವ ಹುಳಿಯಾರು ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯ ಇದೀಗ ಸಾರ್ವಜನಿಕರ ಪಾಲಿಗೆ ’ಮರೀಚಿಕೆ’ಯಾಗಿದೆ. ಬೆಳಿಗ್ಗೆ ೮ ಕಳೆದರೂ ಬಾಗಿಲು ತೆರೆಯದಿರುವುದು ಆಡಳಿತ ವ್ಯವಸ್ಥೆಯ ಅಸಡ್ಡೆಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರಯಾಣಿಕರ ಪಾಲಿಗೆ ಮಾತ್ರವಲ್ಲ, ನಿತ್ಯ ಇಲ್ಲಿ ಕರ್ತವ್ಯ ನಿರ್ವಹಿಸುವ ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರ ಪಾಲಿಗೂ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಯಲು ಶೌಚಾಲಯವೇ ಅನಿವಾರ್ಯ:
ಮುಂಜಾನೆಯ ನೈಸರ್ಗಿಕ ಕರೆಗೆ ಅತ್ಯಗತ್ಯವಾಗಿ ಬೇಕಾಗಿರುವ ಶೌಚಾಲಯವೇ ಸಿಗದಿದ್ದರೆ ಹೇಗೆ, ಬೆಳಿಗ್ಗೆ ಎದ್ದ ತಕ್ಷಣ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಅನಿವಾರ್ಯವಾಗಿ ಬಯಲು ಶೌಚವನ್ನೇ ಆಶ್ರಯಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಪುರುಷರು ಹೇಗೋ ಒಂದು ಕಡೆ ಹೊಂದಿಸಿಕೊಂಡರೂ, ಮಹಿಳೆಯರ ಪರಿಸ್ಥಿತಿ ಹೇಳತೀರದಾಗಿದೆ.
ಹೆದ್ದಾರಿ ಪ್ರಯಾಣಿಕರ ಪರದಾಟ:
ಹುಳಿಯಾರು ಪಟ್ಟಣದ ಮೂಲಕ ಬೆಂಗಳೂರು, ಹೊಸದುರ್ಗ, ಬಳ್ಳಾರಿ ಮುಂತಾದ ದೂರದ ಸ್ಥಳಗಳಿಗೆ ತೆರಳುವ ಬಸ್‌ಗಳು ನಿರಂತರವಾಗಿ ಸಂಚರಿಸುತ್ತವೆ. ಜತೆಗೆ, ಮೂರು ರಾಷ್ಟ್ರೀಯ ಹೆದ್ದಾರಿಗಳು ಸಂಧಿಸುವ ಕೇಂದ್ರ ಬಿಂದು ಇದಾಗಿದ್ದರಿಂದ, ನಿತ್ಯ ಸಾವಿರಾರು ಪ್ರಯಾಣಿಕರು ಹಾಗೂ ಪ್ರವಾಸಿಗರು ಬಸ್ ನಿಲ್ದಾಣವನ್ನು ಆಶ್ರಯಿಸುತ್ತಾರೆ. ಇಷ್ಟೊಂದು ಜನದಟ್ಟಣೆ ಇರುವ ಕಡೆ ಮೂಲಭೂತ ಸೌಕರ್ಯವನ್ನೇ ನಿರ್ಲಕ್ಷಿಸಿರುವುದು ಸ್ಥಳೀಯ ಆಡಳಿತದ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ.
ಹುಳಿಯಾರು ಬಸ್ ನಿಲ್ದಾಣದಲ್ಲಿ ನಿತ್ಯ ಐದಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಲ್ಟ್ (ವಿರಾಮ) ಆಗುತ್ತವೆ. ಅಲ್ಲದೆ ಮುಂಜಾನೆ ೫ ರಿಂದಲೇ ಹೊಸದುರ್ಗ, ಮೈಸೂರು, ಬೆಂಗಳೂರು, ಹಾಸನ ಭಾಗಗಳಿಂದ ಬಸ್‌ಗಳು ಬರಲಾರಂಭಿಸುತ್ತವೆ. ದೂರದ ಊರುಗಳಿಂದ ಸುದೀರ್ಘ ಪ್ರಯಾಣ ಬೆಳೆಸಿ ಬರುವ ಚಾಲಕರು ಮತ್ತು ನಿರ್ವಾಹಕರಿಗೆ, ಸಾರ್ವಜನಿಕ ಶೌಚಾಲಯ ಬೀಗ ಹಾಕಿರುವ ಕಾರಣ, ಚಾಲಕ-ನಿರ್ವಾಹಕರು ಅನಿವಾರ್ಯವಾಗಿ ನಿಲ್ದಾಣದ ಸುತ್ತಮುತ್ತಲಿನ ಮರಗಳನ್ನೋ ಅಥವಾ ಗೋಡೆಗಳನ್ನೋ ಆಶ್ರಯಿಸಬೇಕಾದ ದುಸ್ಥಿತಿ ಬಂದೊದಗಿದೆ.
ಮೌನಕ್ಕೆ ಜಾರಿದ ಜನಪ್ರತಿನಿಧಿಗಳು!
ಸ್ವಚ್ಛ ಭಾರತ’ದ ಕನಸು ಕಾಣುತ್ತಿರುವ ಸರ್ಕಾರಗಳ ನಡುವೆ, ಪಟ್ಟಣ ಪಂಚಾಯಿತಿ ಆಡಳಿತ ಮತ್ತು ಜನಪ್ರತಿನಿಧಿಗಳು ಮಾತ್ರ ಇಂತಹ ಸೂಕ್ಷ್ಮ ವಿಷಯಗಳಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಲೇಟಾಗಿ ಶೌಚಾಲಯ ಬಾಗಿಲು ತೆರೆಯುವ ಸಮಸ್ಯೆ ಒಂದು ದಿನದಲ್ಲ ನಿತ್ಯವೂ ಇದೇ ಆಗಿದ್ದು ಪ್ರಯಾಣಿಕರ ಗೋಳು ಕಣ್ಮುಂದೆ ಕಾಣುತ್ತಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಚಕಾರ ಎತ್ತುತ್ತಿಲ್ಲ. ಪರಿಣಾಮ ಶೌಚಾಲಯ ಇದ್ದರೂ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಾದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಶೌಚಾಲಯವನ್ನು ಬೆಳಗ್ಗೆ ಸರಿಯಾದ ಸಮಯಕ್ಕೆ ತೆರೆಯುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕಿದೆ.


































