Home Lead News ಪರೀಕ್ಷೆಗೆ 3 ದಿನ ಮೊದಲೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಬಿಐ ಆರೋಪಪಟ್ಟಿಯಲ್ಲಿ ಬಹಿರಂಗ

ಪರೀಕ್ಷೆಗೆ 3 ದಿನ ಮೊದಲೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಬಿಐ ಆರೋಪಪಟ್ಟಿಯಲ್ಲಿ ಬಹಿರಂಗ

ನವದೆಹಲಿ,ಆ.7-ನೀಟ್ ಯುಜಿ ಪರೀಕ್ಷೆ ಆರಂಭಕ್ಕೆ ಮೂರು ದಿನಗಳೇ ಮೊದಲೆ‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಆರೋಪಪಟ್ಡಿಯಲ್ಲಿ ಈ ಮಾಹಿತಿ ಉಲ್ಲೇಖಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ವಾಟ್ಸಾಪ್, ಟೆಲಿಗ್ರಾಂ ಮತ್ತು ಆಫ್ ಲೈನ್ ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.


ಈ ಪ್ರಕರಣದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗೆ ಸಂಬಂಧಿಸಿದ ವಿಷಯ ತಜ್ಞರು, ಕೋಚಿಂಗ್‌ ಕೇಂದ್ರಗಳ ನಿರ್ವಾಹಕರು, ಮಧ್ಯವರ್ತಿಗಳು ಹಾಗೂ ಇನ್ನಿತರರು ಭಾಗಿಯಾಗಿದ್ದಾರೆ ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.


ರಸಾಯನಶಾಸ್ತ್ರ ವಿಷಯದ ತಜ್ಞ ಪಿ.ವಿ ಕುಲಕರ್ಣಿ, ಕಳೆದ ಏಪ್ರಿಲ್‌ 25 ರಿಂದ 27ರ ವರೆಗೆ ಪುಣೆಯಲ್ಲಿ ನೀಟ್‌ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನ ನಡೆಸಿದ್ದರು. ಈ ಸಂರ್ಭದಲ್ಲಿ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆಯಲ್ಲಿ ಬಂದಿದ್ದ ಅದೇ ಪ್ರಶ್ನೆಗಳು ಹಾಗೂ ಅದಕ್ಕೆ ಉತ್ತರಗಳನ್ನೂ ಹೇಳಿಕೊಟ್ಟಿದ್ದರು.


ಇದೇ ರೀತಿಯ ವಿಶೇಷ ತರಗತಿಗಳು ಲಾತೂರ್‌ನಲ್ಲಿಯೂ ನಡೆದಿದ್ದವು ಎಂದು ಸಿಬಿಐ ನಡೆಸಿದ ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿಗಳ ನೋಟ್‌ಬುಕ್‌ಗಳಲ್ಲಿ ಬರೆದಿದ್ದ ಪ್ರಶ್ನೆಗಳು ಸೋರಿಕೆಯಾದ ಪ್ರಶ್ನೆಪತ್ರಿಕೆಯೊಂದಿಗೆ ಹೊಂದಿಕೆಯಾಗಿವೆ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.


ಕುಲಕರ್ಣಿ ಅವರ ಮೊಬೈಲ್‌ನಿಂದ ರಸಾಯನಶಾಸ್ತ್ರ ಪ್ರಶ್ನೆಗಳ ಫೋಟೋಗಳು, ಅಭ್ಯರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ನಡೆದ ಸಂಭಾಷಣೆಗಳು ಸೇರಿದಂತೆ ಹಲವು ಪ್ರಮುಖ ಡಿಜಿಟಲ್ ಸಾಕ್ಷ್ಯಗಳು ಲಭಿಸಿವೆ.


ಪರೀಕ್ಷೆಯ ಬಳಿಕ ಒಬ್ಬ ಪೋಷಕರು ಕುಲಕರ್ಣಿ ಅವರನ್ನ ಸಂಪರ್ಕಿಸಿ, ಅವರು ಹೇಳಿದ್ದ ಪ್ರಶ್ನೆಗಳೇ ಪರೀಕ್ಷೆಯಲ್ಲಿ ಬಂದಿದ್ದರಿಂದ ಅವರಿಗೆ ವಾಚ್‌ ವೊಂದನ್ನು ಉಡುಗೊರೆಯಾಗಿ ನೀಡಲು ಬಯಸಿದ್ದಾಗಿಯೂ ತಿಳಿಸಿದ್ದಾರೆ ಎನ್ನಲಾಗಿದೆ. ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಪಡೆಯಲು ಕೂಡ ಕುಲಕರ್ಣಿ ಪ್ರಯತ್ನಿಸಿದ್ದರು ಎಂಬ ಮಾಹಿತಿಯೂ ಸಿಬಿಐಗೆ ದೊರೆತಿದೆ.