
ಗುಬ್ಬಿ, ಆ.೧- ಹಡಪದ ಅಣ್ಣಪ್ಪನವರು ತಮ್ಮ ಕಾಯಕವನ್ನು ಭಕ್ತಿಯಿಂದ ನಿರ್ವಹಿಸುತ್ತಾ, ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ತಾರತಮ್ಯಗಳ ವಿರುದ್ಧ ವಚನಗಳ ಮೂಲಕ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿ ಎಂದು ತಹಶೀಲ್ದಾರ್ ಬಿ.ಆರತಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಹಡಪದ ಅಣ್ಣಪ್ಪ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಶರಣರ ತತ್ವಾದರ್ಶಗಳ ಪಾಲನೆ ಮಾಡಬೇಕು. ೧೨ನೇ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಒಂದು ಸುವರ್ಣ ಯುಗ. ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣದ ಕ್ರಾಂತಿಯಲ್ಲಿ, ಜಾತಿ-ಮತ-ಭೇದವಿಲ್ಲದೆ ಅನೇಕ ಶರಣರು ಪಾಲ್ಗೊಂಡಿದ್ದರು. ಅವರಲ್ಲಿ ಬಸವಣ್ಣನವರ ಅತ್ಯಂತ ಆಪ್ತರು ಮತ್ತು ಸದಾ ಅವರ ನೆರಳಿನಂತೆ ಜೊತೆಯಲ್ಲಿದ್ದವರು ಹಡಪದ ಅಪ್ಪಣ್ಣ ನವರು ಎಂದು ಹೇಳಿದರು.
ಸವಿತಾ ಸಮಾಜದ ಯುವ ಪಡೆಯ ಅಧ್ಯಕ್ಷ ಕಾರ್ತಿಕ್ ಮಾತನಾಡಿ, ೧೨ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಣ್ಣಪ್ಪನವರ ಕೊಡುಗೆ ಅಪಾರ. ಅವರು ಕೇವಲ ಬಸವಣ್ಣನವರ ನಿಜ ಸೇವಕರಾಗಿರದೆ, ತಮ್ಮ ವಚನಗಳ ಮೂಲಕ ಸಾಮಾಜಿಕ ಸಮಾನತೆ, ಕಾಯಕ ತತ್ವ ಹಾಗೂ ದಾಸೋಹ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ಶರಣರು ಎಂದು ಹೇಳಿದರು.
ಸವಿತಾ ಸಮಾಜದ ಅಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ, ಇಂದಿನ ಯುವ ಜನತೆ ಅವರ ಸರಳತೆ, ಪ್ರಾಮಾಣಿಕತೆ ಹಾಗೂ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಇಂದಿನ ದಿನಮಾನದಲ್ಲಿ, ಹಡಪದ ಅಪ್ಪಣ್ಣ ನವರ ಕಾಯಕ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮಾನತೆಯ ತತ್ವಗಳು ನಮಗೆಲ್ಲರಿಗೂ ಆದರ್ಶಪ್ರಾಯವಾಗಿವೆ. ಅವರ ಸರಳ, ಸಜ್ಜನಿಕೆ ಹಾಗೂ ಅಹಂಕಾರವಿಲ್ಲದ ಬದುಕು ಪ್ರತಿಯೊಬ್ಬರಿಗೂ ದಾರಿ ದೀಪವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


































