Home ಜಿಲ್ಲೆ ತುಮಕೂರು ನಾಳೆ ರಾಜ್ಯ ಅನ್ನಪ್ರಸಾದ ಸಮಿತಿ ಸಭೆ

ನಾಳೆ ರಾಜ್ಯ ಅನ್ನಪ್ರಸಾದ ಸಮಿತಿ ಸಭೆ

ತುಮಕೂರು, ಆ. ೧- ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂನ ರಾಜ್ಯ ಘಟಕದಿಂದ ರಾಜ್ಯ ಅನ್ನಪ್ರಸಾದ ಸಮಿತಿ ಸಭೆ ಹಾಗೂ ರಾಜ್ಯ ಕಾರ್ಯಕಾರಿಣಿ ಆಗಸ್ಟ್ ೨ ರಂದು ನಗರದ ಗಾರ್ಡನ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.


ಈ ಸಂಬಂಧ ರಾಷ್ಟ್ರೀಯ ಅನ್ನಪ್ರಸಾದ ಸಮಿತಿ ಅಧ್ಯಕ್ಷ ಟಿ.ಬಿ. ಶೇಖರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದೇವಸ್ಥಾನ ಸಭಾಂಗಣದಲ್ಲಿ ನಡೆದ ತುಮಕೂರು ಸಮಿತಿ ಸಭೆಯಲ್ಲಿ ರಾಜ್ಯ ಸಮಿತಿ ಸಭೆಯ ಪೂರ್ವಭಾವಿ ಸಿದ್ಧತೆ ಕುರಿತು ಚರ್ಚಿಸಲಾಯಿತು.


ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಅನ್ನಪ್ರಸಾದ ಸಮಿತಿ ಅಧ್ಯಕ್ಷ ಟಿ.ಬಿ. ಶೇಖರ್, ಶಬರಿಮಲೈಗೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ, ಮಾಲಾಧಾರಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡುವ ಈ ಸಮಿತಿ ಕಳೆದ ವರ್ಷ ೪೨ ಲಕ್ಷ ಜನರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿತ್ತು. ಈ ಬಾರಿ ಸುಮಾರು ೮೦ ಲಕ್ಷ ಜನರಿಗೆ ಅನ್ನಪ್ರಸಾದ ನೀಡುವ ಗುರಿ ಹೊಂದಿದೆ ಎಂದು ಹೇಳಿದರು.


ಅಯ್ಯಪ್ಪಸ್ವಾಮಿ ಭಕ್ತರು ಶಬರಿಮಲೈಗೆ ಹೋಗುವ ರಾಜ್ಯದ ಗಡಿ ಭಾಗಗಳಾದ ಅತ್ತಿಬೆಲೆ ಚೆಕ್‌ಪೋಸ್ಟ್, ಗುಂಡ್ಲುಪೇಟೆ ಚೆಕ್‌ಪೋಸ್ಟ್ ಹಾಗೂ ಕಾಸರಗೋಡು ಬಳಿ ಅನ್ನಪ್ರಸಾದ ಕೇಂದ್ರಗಳನ್ನು ತೆರೆದು ಪ್ರಸಾದ ವಿತರಣೆ ಮಾಡಲಾಗುವುದು ಎಂದರು. ಈ ಸಂಬಂಧ ಭಾನುವಾರ ನಗರದಲ್ಲಿ ನಡೆಯುವ ರಾಜ್ಯ ಅನ್ನಪ್ರಸಾದ ಸಮಿತಿ ಸಭೆಯಲ್ಲಿ ಹೆಚ್ಚಿನ ವಿಚಾರಗಳ ಚರ್ಚೆಯಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.


ಅನ್ನಪ್ರಸಾದ ಸಮಿತಿ ಸಭೆಯಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಮುರುಗೇಶ್ ಸೆಲ್ವಂ, ಉಪಾಧ್ಯಕ್ಷ ಆನಂದ್ ವಾಮನ ನಾಯಕ್, ಕಾರ್ಯದರ್ಶಿ ಎನ್. ರಾಜನ್, ಜಂಟಿ ಕಾರ್ಯದರ್ಶಿ ವಿನೋದ್‌ಕುಮಾರ್, ಸದಸ್ಯರಾದ ಸಿ.ಎಸ್.ವಿ. ಪ್ರಸಾದ್, ಇ. ಕಾಂತೇಶ್, ಸಮಾಜಂನ ರಾಜ್ಯ ಅಧ್ಯಕ್ಷ ಎನ್. ಜಯರಾಮ್, ರಾಷ್ಟ್ರೀಯ ಅನ್ನಪ್ರಸಾದ ಸಮಿತಿ ಸಂಯೋಜಕ ಎಸ್.ಎನ್. ಕೃಷ್ಣಯ್ಯ ಮೊದಲಾವರು ಭಾಗವಹಿಸುವರು ಎಲ್ಲಾ ಜಿಲ್ಲೆಗಳ ಅನ್ನದಾಸೋಹ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸುವರು ಎಂದರು.


ಸಭೆಯಲ್ಲಿ ರಾಷ್ಟ್ರೀಯ ಅನ್ನಪ್ರಸಾದ ಸಮಿತಿ ಸಂಯೋಜಕ ಎಸ್.ಎನ್. ಕೃಷ್ಣಯ್ಯ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಎನ್. ನಾಗೇಂದ್ರ, ಮಹಿಳಾ ಘಟಕ ಅಧ್ಯಕ್ಷೆ ಆರ್. ನಾಗರತ್ನ, ಮುಖಮಡರಾದ ಕೆ. ಸಂಗಪ್ಪ, ಭೀಮರಾಜ್, ಓಂಕಾರ್, ರಘು, ಗಿರೀಶ್, ಸಿ.ಕೆ. ರಾಜಣ್ಣ, ಲಕ್ಷ್ಮೀಶ್, ಕುಮಾರಸ್ವಾಮಿ, ಪ್ರಕಾಶ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.