
ಮಧುಗಿರಿ, ಆ.೧- ಗುರು ಎಂದರೆ ಬೆಳಕು. ಕತ್ತಲೆಯ ಪೊರೆಯನ್ನು ಕಳಚಿದ ಬೆಳಕು. ಅರಿವಿನ ಅಂಕುಶವನ್ನು ಅಂತರಾಳಕ್ಕೆ ಎಚ್ಚರಿಸುವ ಬೆಳಕು. ಎರಡು ಅಕ್ಷರದ ಗುರು ಎನ್ನುವ ಪದಕ್ಕೆ ಅಗಾಧವಾದ ಶಕ್ತಿ ಇದೆ ಎಂದು ಶಿಕ್ಷಕ ಅಮರಾವತಿ ದ್ರೆಹಾಚಾರ್ ಹೇಳಿದರು.
ಗುರುಪೂರ್ಣಿಮೆ ಅಂಗವಾಗಿ ಪಟ್ಟಣದ ಕಾಳಿಕಾ ಕಮಟೇಶ್ವರ ದೇವಾಲಯದಲ್ಲಿ ನಡೆದ ಬೆಳದಿಂಗಳ ಗುರು ಪೂರ್ಣಿಮೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಯಿ ಮಾತು ಕಲಿಸಿದ, ಮತಿಯ ನೀಡಿದ ಗುರು. ತಂದೆ ಕೈಹಿಡಿದು ದಾರಿ ನಡೆಸಿದ ಮಾರ್ಗದರ್ಶಿ ಗುರು. ಶಿಕ್ಷಕ ಜ್ಞಾನದ ಗುರು. ಪುಸ್ತಕ ದಿಕ್ಸೂಚಿ ಗುರು. ಹೀಗೆ ಗುರು ಎನ್ನುವ ಪದ ಆಕಾಶದಷ್ಟು ಎತ್ತರವಾಗಿರುತ್ತದೆ. ಗುರಿಯನ್ನು ಮುಟ್ಟಿದ ಶಿಷ್ಯನ ಸಾರ್ಥಕತೆಯಲ್ಲಿ ಗುರುವಿನ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದರು.
ಗುರುವಿಲ್ಲದವನು ಪೂರ್ಣ ಗುರಿಯನ್ನು ಮುಟ್ಟಲಾರ. ಸೇವಾ ಮನೋಭಾವವೇ ಗುರುವಿಗೆ ಅರ್ಪಿಸುವ ಮಹಾ ಕೃತಜ್ಞತೆಯಾಗಿರುತ್ತದೆ. ಬಡವ ಶ್ರೀಮಂತನೆಂಬ ಭೇದ ಭಾವವಿಲ್ಲ. ಜಗತ್ತಿಗೆ ಶ್ರೀಮಂತನಾದರೂ ಗುರುವಿನ ಅಡಿದಾವರೆಗಳಲ್ಲಿ ಜ್ಞಾನಕ್ಕಾಗಿ ಅಂಗಲಾಚಬೇಕು. ಇದು ಗುರು ಪರಂಪರೆಯ ಪಾರಂಪರಿಕ ಮಹತ್ವವೇ ಹೌದು.. ಕಾರುಣ್ಯ ಮತ್ತು ಭಕ್ತಿಗಳೆರಡು ಸಾಧನೆಯ ಚಿಲುಮೆಯಾಗಿರುತ್ತದೆ. ಶಿಷ್ಯ ಚಿಲುಮೆಯಾದರೆ, ಗುರು ಪವಿತ್ರ ಗಂಗೆಯಾಗಿರುತ್ತಾನೆ . ಜ್ಞಾನಿಯಾದವನು ತುಳುಕುವುದಿಲ್ಲ ನಯ ವಿನಯ ಸಂಸ್ಕಾರಗಳಿಂದ ಬಾಗುತ್ತಾನೆ. ಇಂತಹ ಗುರು ಪರಂಪರೆಯ ಮಾರ್ಗದರ್ಶನ ಪ್ರಾಚೀನ ಕಾಲದಿಂದಲೂ ತನ್ನ ಅಸ್ತಿತ್ವವನ್ನು ಮೇರು ಪರ್ವತದಂತೆ ಕಾಪಾಡಿಕೊಂಡು ಬಂದಿದೆ.. ನಮ್ಮೊಳಗಿನ ಜ್ಞಾನವನ್ನು ಮುಂದಿನ ಪೀಳಿಗೆಗೆ ಹಂಚಿದಾಗ ಮಾತ್ರ ಕಿಂಚಿತ್ತಾದರೂ ಗುರುವಿನ ಋಣ ತೀರಿಸಿದಂತಾಗುತ್ತದೆ ಎಂದರು.
ಇದೇ ಶುಭ ಸಂದರ್ಭದಲ್ಲಿ, ಹಳೇಹಟ್ಟಿ ಶ್ರೀನಿವಾಸ್ ರವರನ್ನು ವಿಶ್ವಶಂಕರ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಶ್ರೀಧರ್, ಪುರೋಹಿತ ವೇದ ಬ್ರಹ್ಮಶ್ರೀ ದೊಡ್ಡೇರಿ ಸಾಯಿಪ್ರಸಾದ್, ಚಂದ್ರಚಾರ್, ನಾಗರತ್ನ, ಜಯಲಕ್ಷ್ಮಮ್ಮ, ರಮೇಶ್, ಶಶಾಂಕ್ ಮತ್ತಿತರರು ಉಪಸ್ಥಿತರಿದ್ದರು.


































