
ಪಾವಗಡ, ಆ. ೧- ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಶ್ರೀ ಗುಜ್ಜಾರಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪ್ರತಿವರ್ಷ ಆಷಾಢ ಮಾಸದ ಶುದ್ಧ ದ್ವಾದಶಿಯಿಂದ ಒಂದು ವಾರದ ಕಾಲ ಶ್ರೀ ಗುಜ್ಜಾರಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. ಅದರ ಭಾಗವಾಗಿ ವಿವಿಧ ಕಾರ್ಯಕ್ರಮಗಳು ನೆರವೇರುವುದು ಸಂಪ್ರದಾಯವಾಗಿದೆ.
ಅದರಂತೆ ಈ ವರ್ಷದ ಆಷಾಢಮಾಸದಲ್ಲಿ ಆರಂಭಗೊಂಡ ಜಾತ್ರಾ ಕಾರ್ಯಕ್ರಮಗಳಲ್ಲಿ ಕಳಶ ಸ್ಥಾಪನೆ, ಮಹಿಳೆಯರಿಂದ ಹಿಟ್ಟಿನ ಆರತಿ, ಮೆರವಣಿಗೆ ಭೂತಪ್ಪಗಳ ಭೂತಬಲಿ ಸೇವೆ ಬಿಲ್ಲುಗೂಡು ಸಣ್ಣ ರಥೋತ್ಸವ ಸೀತಾರಾಮರ ಕಲ್ಯಾಣೋತ್ಸವ ಬ್ರಹ್ಮರಥೋತ್ಸವ ವಸಂತೋತ್ಸವಗಳು ನೆರವೇರಿದವು. ನಂತರ ಗುಜ್ಜಾರಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವವು ಸೀತಾರಾಮ ಲಕ್ಷ್ಮಣ ದೇವರುಗಳ ಸಮೇತ ವೈಭವವಾಗಿ ನೆರವೇರಿತು.
ಕುಂಚಿಟಿಗ ಒಕ್ಕಲಿಗರ ಆರಾಧ್ಯ ದೈವ ಆಗಿರುವ ಗುಜ್ಜಾರಿ ಆಂಜನೇಯ ಸ್ವಾಮಿಗೆ ಕರ್ನಾಟಕ ಅಲ್ಲದೆ ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಅಪಾರ ಭಕ್ತ ಸಮೂಹವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಿದರು.
ಹರಕೆ ಹೊತ್ತ ಭಕ್ತಾದಿಗಳು ದೊಡ್ಡ ಗಾತ್ರದಲ್ಲಿ ರುದ್ರಾಕ್ಷಿಗಳ ಮಾಲೆ ವಿವಿಧ ಜಾತಿಯ ಹೂ ಮಾಲೆಗಳನ್ನು ಭಕ್ತಿಯಿಂದ ತಂದು ರಥಕ್ಕೆ ಸಮರ್ಪಿಸಿದರು. ಸಂಜೆ ಮೂಲ ಸ್ಥಳಕ್ಕೆ ರಥವನ್ನು ಎಳೆಯಲಾಯಿತು


































