Home ಮುಖಪುಟ ಸುದ್ದಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ವೈಶಾಲಿ, ನ.೧೩-ರಾಜ್ಯದಲ್ಲಿ ಛತ್ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿರುವ ಹೊತ್ತಲ್ಲೇ, ವೈಶಾಲಿಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದ್ದು, ೧೫ ವರ್ಷದ ಬಾಲಕಿಯೊಬ್ಬಳ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ವೈಶಾಲಿಯ ಗೋರೌಲ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪ್ರೇಮರಾಜ್ ಗ್ರಾಮದಲ್ಲಿ ನಡೆದಿದ್ದು, ಜಮೀನು ಮಾರಾಟ ವಿಚಾರದಲ್ಲಿ ಕುಟುಂಬಸ್ಥರ ನಡುವೆ ನಡೆದ ವಾಗ್ವಾದವೇ ಈ ದುರ್ಘಟನೆಗೆ ಕಾರಣವಾಗಿದೆ.


ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಮೃತರನ್ನು ೫೫ ವರ್ಷದ ನಿರ್ಮಲಾ ದೇವಿ, ೩೫ ವರ್ಷದ ಸೀಮಾ ದೇವಿ ಮತ್ತು ೧೨ ವರ್ಷದ ಮುನ್ನಾ ಕುಮಾರ್ ಎಂದು ಗುರುತಿಸಲಾಗಿದೆ.


ತಮ್ಮ ಪೂರ್ವಜರಿಗೆ ಸೇರಿದ್ದ ಆಸ್ತಿಯನ್ನು ಶ್ಯಾಮನಂದನ್ ಸಿಂಗ್ ಅವರ ಮರಣದ ನಂತರ, ಅವರ ಏಕೈಕ ಪುತ್ರ ರಾಹುಲ್, ನಿರಂತರವಾಗಿ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ. ಕುಟುಂಬದ ಇತರ ಸದಸ್ಯರು ಇದನ್ನು ವಿರೋಧಿಸಿದ್ದರು. ಶನಿವಾರ ರಾಹುಲ್ ಮತ್ತೊಂದು ಜಮೀನು ಮಾರಾಟ ಮಾಡಿ, ಅದರ ನೋಂದಣಿಯನ್ನು ಪೂರ್ಣಗೊಳಿಸಿದ್ದ. ಈ ವಿಷಯ ತಿಳಿದ ಕೂಡಲೇ, ಆತನ ಪತ್ನಿ ಸೀಮಾ ದೇವಿ ನೋಂದಣಿ ಕಚೇರಿಯಿಂದ ಜಮೀನಿನ ದಾಖಲೆಗಳ ಪ್ರತಿಯನ್ನು ಪಡೆದುಕೊಂಡು, ಈ ಮಾರಾಟದ ಬಗ್ಗೆ ರಾಹುಲ್‌ನನ್ನು ಪ್ರಶ್ನಿಸಿದ್ದಳು .


ಈ ಸಮಯದಲ್ಲಿ, ಅವರ ನಡುವೆ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದಿದೆ. ರಾಹುಲ್ ಮನೆಯಿಂದ ಹೊರಹೋಗುವ ಮೊದಲು ತನ್ನ ತಾಯಿ ಮತ್ತು ಪತ್ನಿಯ ಮೇಲೆ ಹಲ್ಲೆ ನಡೆಸಿದನೆಂದು ಆರೋಪಿಸಲಾಗಿದೆ.


ತದನಂತರ, ತಡರಾತ್ರಿ, ಕುಟುಂಬದ ನಾಲ್ವರು ಸದಸ್ಯರು ವಿಷಪೂರಿತ ವಸ್ತುವನ್ನು ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ