
ಕಲಬುರಗಿ,ನ.13-ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ನೀರಿನ ಅಭಾವ. ಇಂತಹ ಬರದ ಸಂಕಷ್ಟದ ನಡುವೆಯೂ ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದ ರೈತನೊಬ್ಬ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಕೇವಲ ಮೂರು ಕೆ.ಜಿ. ಈರುಳ್ಳಿ ಬೀಜ ಬಿತ್ತನೆ ಮಾಡಿ, ಎರಡು ಎಕರೆ ಜಮೀನಿನಲ್ಲಿ ಬರೋಬ್ಬರಿ 80ರಿಂದ 100 ಕ್ವಿಂಟಾಲ್ ಈರುಳ್ಳಿ ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ.
ಹೌದು. ಎರಡು ಎಕರೆ ಜಮೀನನ್ನು ಲೀಜ್ಗೆ ಪಡೆದು ಕೃಷಿ ಆರಂಭಿಸಿದ ರೈತ ಶ್ರೀಕಾಂತ್, ಪಕ್ಕದ ಜಮೀನಿನಿಂದ ನೀರು ಪಡೆದು ರೇನ್ಪೈಪ್ ಮೂಲಕ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸತತ ನಾಲ್ಕು ತಿಂಗಳ ಪರಿಶ್ರಮದ ಫಲವಾಗಿ ಉತ್ತಮ ಇಳುವರಿ ಪಡೆದಿದ್ದಾರೆ. ಈ ಕೃಷಿಗಾಗಿ ಒಟ್ಟು 70ರಿಂದ 80 ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಶ್ರೀಕಾಂತ್ ಕಲಬುರಗಿ ಬೆಳೆದ ಈರುಳ್ಳಿಗೆ ವಿದೇಶದಲ್ಲೂ ಬೇಡಿಕೆ ಬಂದಿದೆ. ಬೀಜ ಉತ್ಪಾದನೆಗಾಗಿ ಈರುಳ್ಳಿ ಖರೀದಿಸಲು ಕಂಪನಿಯೊಂದು ಮುಂದೆ ಬಂದಿದ್ದು, ಪ್ರತಿ ಕ್ವಿಂಟಾಲ್ಗೆ 5 ಸಾವಿರ ರೂಪಾಯಿ ದರ ನಿಗದಿಪಡಿಸಿದೆ. ಕಲಬುರಗಿಯಿಂದ ಔರಂಗಾಬಾದ್ ಮಾರ್ಗವಾಗಿ ಥೈಲ್ಯಾಂಡ್ಗೆ ಈರುಳ್ಳಿ ರವಾನೆಯಾಗುತ್ತಿದೆ.
ಒಟ್ಟಿನಲ್ಲಿ ಮಳೆ ಇಲ್ಲ, ನೀರಿನ ಕೊರತೆ ಇದೆ ಎಂದು ಕೃಷಿಯಿಂದ ಹಿಂದೆ ಸರಿಯುವ ರೈತರಿಗೆ ಜಂಬಗಾ (ಬಿ) ಗ್ರಾಮದ ರೈತ ಶ್ರೀಕಾಂತ್ ಕಲಬುರಗಿ ಮಾದರಿಯಾಗಿದ್ದಾರೆ. ಕಡಿಮೆ ಬಂಡವಾಳ, ಸಮರ್ಪಕ ನೀರಾವರಿ ನಿರ್ವಹಣೆ ಹಾಗೂ ಸತತ ಪರಿಶ್ರಮದಿಂದ ಬರದ ನಡುವೆಯೂ ಉತ್ತಮ ಇಳುವರಿ ಪಡೆಯಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಸಾಧನೆ ಇತರೆ ರೈತರಲ್ಲೂ ಹೊಸ ಭರವಸೆ ಮೂಡಿಸಿದೆ.
…………………………
3 ಕೆ.ಜಿ. ಈರುಳ್ಳಿ ಬೀಜಕ್ಕೆ 100 ಕ್ವಿಂಟಾಲ್ ಇಳುವರಿ
ಜಂಬಗಾ (ಬಿ) ಗ್ರಾಮದ ರೈತ ಶ್ರೀಕಾಂತ್ಗೆ ವಿದೇಶದಿಂದ ಬಂತು ಬೇಡಿಕೆ
ಥೈಲ್ಯಾಂಡ್ಗೆ ರವಾನೆಯಾಗುತ್ತಿದೆ ಕಲಬುರಗಿ ಈರುಳ್ಳಿ





















