Home ಜಿಲ್ಲೆ ಕಲಬುರಗಿ ಶಾಲೆಗಳಲ್ಲಿ ಕ್ಲಸ್ಟರ್ ಕಿಚನ್ ಸೆಂಟರ್ ಜಾರಿಗೊಳಿಸಬೇಡಿ

ಶಾಲೆಗಳಲ್ಲಿ ಕ್ಲಸ್ಟರ್ ಕಿಚನ್ ಸೆಂಟರ್ ಜಾರಿಗೊಳಿಸಬೇಡಿ

ಕಲಬುರಗಿ,ನ.13-ಶಾಲೆಗಳಲ್ಲಿ ಕ್ಲಸ್ಟರ್ ಕಿಚನ್ ಸೆಂಟರ್‍ನ್ನು ಜಾರಿಗೊಳಿಸುವುದನ್ನು ತಡೆ ಹಿಡಿದು ಬಿಸಿಯೂಟ ತಯಾರಿಸುವುದನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಕರ್ನಾಟಕ ಸಮತಾ ಸೈನಿಕ ದಳ ಒತ್ತಾಯಿಸಿದೆ.
ಈ ಸಂಬಂಧ ಸಮತಾ ಸೈನಿಕದಳ ರಾಜ್ಯ ಉಪಾಧ್ಯಕ್ಷ ಸಂಜೀವ ಟಿ.ಮಾಲೆ ಅವರ ನೇತೃತ್ವದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಉದ್ದಾ, ವಿಭಾಗೀಯ ಉಪಾಧ್ಯಕ್ಷ ಈರಣ್ಣ ಜಾನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ ಭಾವಿಮನಿ, ಮಹಾದೇವ ನಾಟಿಕಾರ, ಮಲ್ಲಮ್ಮ ಜಗತಿ, ಪದ್ಮಾವತಿ ಅಟ್ಟೂರ್, ಶರಣು ಕಡಗಂಚಿ, ಇಂದುಮತಿ ಭರತನೂರ, ಶಿವಲಿಂಗಮ್ಮ ಮತ್ತು ಶಿವಮೂರ್ತಿ ಸೇರಿದಂತೆ ಮತ್ತಿತರರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಬದಲಾಗಿ ಕ್ಲಸ್ಟರ್ ಕಿಚನ್ ಸೆಂಟರ್‍ನ್ನು ಜಾರಿಗೊಳಿಸಿದರೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ಉದ್ಯೋವಿಲ್ಲದಂತಾಗುತ್ತದೆ. ಅವರ ಕುಟುಂಬಗಳು ಬೀದಿಗೆ ಬರುತ್ತವೆ. ಹೀಗಾಗಿ ಕ್ಲಸ್ಟರ್ ಕಿಚನ್ ಸೆಂಟರ್‍ನ್ನು ಜಾರಿಗೊಳಿಸುವುದನ್ನು ಸರ್ಕಾರ ತಡೆಯಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಬಿಸಿಯೂಟ ನೌಕರರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ 1000 ರೂ.ಗಳನ್ನು ತಡೆ ಹಿಡಿದಿದೆ. ರಾಜ್ಯ ಸರ್ಕಾರ 2 ತಿಂಗಳ ಗೌರವಧನ ಮಾತ್ರ ನೀಡಿದೆ. ತಕ್ಷಣವೇ ಉಳಿದ ಗೌರವಧನ ನೀಡಬೇಕು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಬಿಸಿಯೂಟ ನೌಕರರ ಗೌರವಧನ ಕಾರ್ಮಿಕ ವೇತನದಂತೆ ಜಾರಿಗೊಳಿಸಬೇಕು, ಬಿಸಿಯೂಟ ನೌಕರರ ಸೇವೆ ಖಾಯಂಗೊಳಿಸಬೇಕು, ಬಿಸಿಯೂಟ ನೌಕರರಿಗೆ ಹೆರಿಗೆ ರಜೆ ಮಂಜೂರು ಮಾಡಬೇಕು, ಬಿಸಿಯೂಟ ನೌಕರರು ಆಕಸ್ಮಿಕವಾಗಿ ಮರಣ ಹೊಂದಿದರೆ ಅದೇ ಹುದ್ದೆಯಲ್ಲಿ ಅವರ ಕುಟುಂಬದವರಿಗೆ ನೇಮಕ ಮಾಡಬೇಕು, ಬಿಸಿಯೂಟ ನೌಕರರು ನಿವೃತ್ತಿ ಹೊಂದಿದ ಮೇಲೆ ಜೀವನ ನಡೆಸಲು 3 ಸಾವಿರ ರೂ.ಭತ್ಯೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.