Home ಮುಖಪುಟ ಸುದ್ದಿ ಬರಕ್ಕೆ ನೆರವು, ಮೋದಿಗೆ ಡಿಕೆಶಿ ಮನವಿ

ಬರಕ್ಕೆ ನೆರವು, ಮೋದಿಗೆ ಡಿಕೆಶಿ ಮನವಿ

ಬೆಂಗಳೂರು, ನ. ೧೩- ಕರ್ನಾಟಕ ರಾಜ್ಯ ಭೀಕರ ಬರದಲ್ಲಿದ್ದು, ಬರ ನಿರ್ವಹಣೆಗೆ ಕೇಂದ್ರದಿಂದ ಹೆಚ್ಚಿನ ನೆರವು ನೀಡಬೇಕು ಎಂಬ ಆಗ್ರಹವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ಮುಂದಿಟ್ಟು ಮನವಿ ಪತ್ರ ಸಲ್ಲಿಸಿದರು.


ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಇಂದು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರು ಮೆಟ್ರೋದ ಪಿಂಕ್ ಮಾರ್ಗಕ್ಕೆ ಚಾಲನೆ ನೀಡಿದ ನಂತರ ಬೆಂಗಳೂರಿನ ಐಐಎಂಬಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ರಾಜ್ಯ ಭೀಕರ ಬರದಲ್ಲಿದೆ. ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದೆ. ರೈತರು ಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ಪ್ರತಿ ಎಕರೆಗೆ ಐದು ಸಾವಿರ ರೂ.ಘೋಷಣೆ ಮಾಡಿದೆ. ಬರ ಪರಿಸ್ಥಿತಿ ನಿರ್ವಹಿಸಲು ನಮಗೆ ಕೇಂದ್ರದಿಂದ ಹೆಚ್ಚಿನ ನೆರವು ಅಗತ್ಯವಿದೆ .ಹಾಗಾಗಿ ರಾಜ್ಯಕ್ಕೆ ಬರ ನಿರ್ವಹಣೆಗೆ ನೆರವು ಕೊಡಿ ಎಂದು ಪ್ರಧಾನಿ ಅವರಲ್ಲಿ ಮನವಿ ಮಾಡಿದರು.


ರಾಜ್ಯದಲ್ಲಿ ಮಳೆ ಕೊರತೆಯಿಂದ ಈ ವರ್ಷ ಸುಮಾರು ೬೨ ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಾವು ಕೇಂದ್ರಕ್ಕೆ ೨೨ ಸಾವಿರ ಕೋಟಿ ರೂ. ನೆರವು ಕೋರಿದ್ದೇವೆ ಎಂದು ಅವರು ಹೇಳಿ, ಪ್ರಧಾನಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.


ದೆಹಲಿಗೆ ಸರ್ವಪಕ್ಷ ನಿಯೋಗದ ಜತೆ ಬಂದು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಎಲ್ಲವನ್ನು ವಿವರಿಸುತ್ತವೆ ಎಂದು ಹೇಳಿದ ಮುಖ್ಯಮಂತ್ರಿಗಳು, ಜನ ಸಂಕಷ್ಟದಲ್ಲಿದ್ದಾರೆ ನಾವು ಅವರಿಗೆ ಸಹಾಯ ಹಸ್ತ ಚಾಚಲೇಬೇಕು ಎಂದು ಹೇಳಿದರು.
ರೈತರ ಸಂಕಷ್ಟಗಳನ್ನು ಪ್ರಧಾನಿ ಅವರ ಗಮನಕ್ಕೆ ತಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿ ಕಬ್ಬು ಬೆಳೆಗಾರರು ಹೆಚ್ಚಿನ ಬೆಲೆ ನೀಡುವಂತೆ ಆಗ್ರಹಿಸಿದ್ದಾರೆ.


೨೦೨೬-೨೭ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (ಈಖP) ೩,೬೫೦ ಆಗಿದ್ದು, ರೈತರು ಪ್ರತಿ ಟನ್‌ಗೆ ೫,೫೦೦ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.


೨೦೧೯ರಿಂದ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ ಪ್ರತಿ ಕೆ.ಜಿ.ಗೆ ೩೧ರಲ್ಲೇ ಸ್ಥಿರವಾಗಿದೆ. ಕರ್ನಾಟಕಕ್ಕೆ ಎಥೆನಾಲ್ ಹಂಚಿಕೆಯಲ್ಲೂ ನ್ಯಾಯಯುತ ಪಾಲು ನೀಡಬೇಕು ಎಂದು ಅವರು ಆಗ್ರಹಿಸಿದರು.


ಕೇಂದ್ರ-ರಾಜ್ಯಗಳ ಸಹಕಾರಕ್ಕೆ ಕರೆ


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವನ್ನು ಒತ್ತಿಹೇಳಿದ ಶಿವಕುಮಾರ್, ಕರ್ನಾಟಕವು ತನ್ನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಕೇಂದ್ರ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಸಿದ್ಧವಿದೆ ಎಂದರು.


ಬಸವಣ್ಣನವರ “ಕಾಯಕವೇ ಕೈಲಾಸ” ಎಂಬ ತತ್ವ ಹಾಗೂ ಭಗವದ್ಗೀತೆಯ ಕರ್ತವ್ಯ ನಿಷ್ಠೆಯ ಸಂದೇಶವನ್ನು ಉಲ್ಲೇಖಿಸಿದ ಅವರು, ಪಿಂಕ್ ಲೈನ್ ಉದ್ಘಾಟನೆಯು ಸಾವಿರಾರು ಎಂಜಿನಿಯರ್‌ಗಳು, ಕಾರ್ಮಿಕರು ಮತ್ತು ಅಧಿಕಾರಿಗಳ ಪರಿಶ್ರಮ ಹಾಗೂ ಸಮರ್ಪಣೆಯ ಪ್ರತೀಕವಾಗಿದೆ ಎಂದರು.
ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸ್ಮರಿಸಿದ ಅವರು, ಸಂಕುಚಿತ ಗಡಿಗಳನ್ನು ಮೀರಿ ಎಲ್ಲರ ಕಲ್ಯಾಣಕ್ಕಾಗಿ ಸರ್ಕಾರಗಳು ಕೆಲಸ ಮಾಡಬೇಕು ಎಂದು ಹೇಳಿದರು.
“ಮೆಟ್ರೋ ಮಾರ್ಗವು ಎರಡು ಸ್ಥಳಗಳನ್ನು ಸಂಪರ್ಕಿಸುತ್ತದೆ. ಆದರೆ, ಸಹಕಾರವು ಸರ್ಕಾರಗಳು ಮತ್ತು ಜನರನ್ನು ಸಂಪರ್ಕಿಸುತ್ತದೆ. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಸಾಗಿದಾಗ ಮಾತ್ರ ರಾಷ್ಟ್ರ ಪ್ರಗತಿಯತ್ತ ಮುನ್ನಡೆಯುತ್ತದೆ” ಎಂದು ಹೇಳಿದರು.
ಜನರ ಜನಾದೇಶವು ರಾಜಕೀಯ ಪಕ್ಷಗಳಿಗೆ ಆಡಳಿತ ನಡೆಸುವ ಜವಾಬ್ದಾರಿಯನ್ನು ನೀಡುತ್ತದೆ. ಆದರೆ, ಜನರ ಸೇವೆ ಮಾಡುವುದು ಮತ್ತು ದೇಶದ ಪ್ರತಿಯೊಬ್ಬ ನಾಗರಿಕನ ಜೀವನವನ್ನು ಉತ್ತಮಗೊಳಿಸುವುದೇ ಆ ಜವಾಬ್ದಾರಿಯ ಅಂತಿಮ ಗುರಿಯಾಗಿರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಭಾಷಣದ ಕೊನೆಯಲ್ಲಿ ಹೇಳಿದರು.